ಬೆಂಗಳೂರು: ಸಚಿವ ಶ್ರೀರಾಮುಲು ಮೇಲೆ 6 ಸಾವಿರ ಪುಟಗಳ ಆರೋಪಪಟ್ಟಿ ದಾಖಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಬಳ್ಳಾರಿ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀರಾಮುಲು ಅವರು ಜಾಮೀನು ತೆಗೆದುಕೊಂಡು ಓಡಾಡುತ್ತಿದ್ದಾರೆ. ಕಳೆದ ತಿಂಗಳು 17ರಂದು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವರ್ಗಾವಣೆಯಾಗಿ ವಿಚಾರಣೆ ನಡೆದಿದೆ. ಬಳ್ಳಾರಿ ಹೃದಯ ಭಾಗದ ಕಾಲುವೆಯಲ್ಲಿ ರುಕ್ಮಿಣಿ ಲೇಔಟ್ ಅನ್ನು ಜನಾರ್ದನ ರೆಡ್ಡಿ ಅವರು ಮತ್ತೊಂದೆಡೆ ರಾಮುಲು 27.25 ಎಕರೆ ಜಮೀನಿಗೆ ಕಾಂಪೌಂಡ್ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
2002ರಲ್ಲಿ ಆಕುಲ ಲಕ್ಷ್ಮಮ್ಮ ಅವರ 17.25 ಎಕರೆಯನ್ನು 24-10-2002 ರಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ ಅವರಿಗೆ ಎಕರೆಗೆ 2 ಲಕ್ಷದಂತೆ ಮಾರಾಟ ಮಾಡುತ್ತಾರೆ. ಅದೇ ದಿನ ಆಕುಲ ಲಕ್ಷ್ಮಮ್ಮ ಹಾಗೂ ಕುಟುಂಬದವರು ಶ್ರೀರಾಮುಲು ಅವರಿಗೆ 27.5 ಎಕರೆ ಮತ್ತೊಂದು ಜಮೀನನ್ನು ಮಾರಾಟ ಮಾಡುತ್ತಾರೆ. ಒಂದು ಎಕರೆಗೆ 10 ಸಾವಿರದಂತೆ ಮಾರಾಟ ಮಾಡಿಕೊಳ್ಳುತ್ತಾರೆ. ಅಂದು ಪರಮೇಶ್ವರ್ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಭೂಮಿ ವರ್ಗಾವಣೆ ಆಗುತ್ತದೆ. ಈ ಜಾಗದಲ್ಲಿ ನದಿ ಕಾಲುವೆ ಕಾಮಗಾರಿಗಾಗಿ 10 ಎಕರೆ ಜಾಗವನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ 'ಉಗ್ರ'ಪ್ಪ
ಪರಮೇಶ್ವರ ರೆಡ್ಡಿ ಅವರು 17.5 ಎಕರೆ ಜಮೀನನ್ನು ಕೃಷಿಯೇತರ ಜಮೀನಾಗಿ ಪರಿವರ್ತಿಸಿ, ನಂತರ ಅದನ್ನು ಗಿಫ್ಟ್ ಡೀಡ್ ಆಗಿ ಅವರ ಪುತ್ರಿ ಅಂದರೆ ಜನಾರ್ದನ ರೆಡ್ಡಿ ಅವರ ಶ್ರೀಮತಿಗೆ 21-03-2006ರಲ್ಲಿ ನೀಡುತ್ತಾರೆ. 2-2-2011ರಲ್ಲಿ ಶ್ರೀರಾಮುಲು ಅವರು 27.25 ಎಕರೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿಕೊಳ್ಳುತ್ತಾರೆ. ರೆವೆನ್ಯೂ ಇನ್ಸ್ಪೆಕ್ಟರ್, ತಹಶೀಲ್ದಾರ್, ಎಸಿ, ಡಿಸಿ ಅಧಿಕಾರಿಗಳನ್ನು ಬಳಸಿ ಪರಿವರ್ತನೆ ಪ್ರಕ್ರಿಯೆ ಮಾಡಿಸಿಕೊಳ್ಳುತ್ತಾರೆ. ಕಾಲುವೆ ಕಾಮಗಾರಿಗಾಗಿ ಸ್ವಾಧೀನವಾಗಿದ್ದ ಸರ್ಕಾರಿ ಜಮೀನನ್ನು ಆಕುಲ ಲಕ್ಷ್ಮಮ್ಮ ಅವರ ಜಮೀನು ಎಂದು ತೋರಿಸಿ ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ. ಅಲ್ಲಿ ನಿರ್ಮಾಣವಾಗಿದ್ದ ಮನೆಗಳನ್ನು ಒಡೆದು ಹಾಕಿ ತಮ್ಮ ಆಸ್ತಿ ಎಂದು ಕಾಂಪೌಂಡ್ ಹಾಕಿಕೊಳ್ಳುತ್ತಾರೆ. ಅತ್ತ ಕಾಲುವೆಯ ಒಂದು ಭಾಗದಲ್ಲಿ ಆಕುಲ ಲಕ್ಷ್ಮಮ್ಮ ಅವರಿಗೆ ಸೇರಿದ್ದ 17.5 ಎಕರೆಯನ್ನು ಜನಾರ್ದನ ರೆಡ್ಡಿ ಅವರ ಪತ್ನಿ ರುಕ್ಮಿಣಿ ಲೇಔಟ್ ಮಾಡಿಕೊಂಡಿದ್ದರೆ, ಕಾಲುವೆಯ ಮತ್ತೊಂದು ಭಾಗದಲ್ಲಿ ಆಕುಲ ಲಕ್ಷ್ಮಮ್ಮ ಅವರ ಹೆಸರಿನಲ್ಲಿ ಸರ್ಕಾರಿ ಜಮೀನನ್ನು ಕಬಳಿಸಿರುತ್ತಾರೆ ಎಂದು ಆರೋಪಿಸಿದ್ದಾರೆ.
ಕಬಳಿಕೆಯಾದ ಜಾಗದಲ್ಲಿ ಇದ್ದ ಮಾಲೀಕರು ದೂರು ನೀಡಿದಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವುದಿಲ್ಲ. 14-6-2013ರಲ್ಲಿ ಖಾಸಗಿ ದೂರು ದಾಖಲಾಗುತ್ತದೆ. ನಂತರ ನ್ಯಾಯಾಲಯವು ಬಳ್ಳಾರಿ ಲೋಕಾಯುಕ್ತದಿಂದ ತನಿಖೆಗೆ ಆದೇಶಿಸುತ್ತದೆ. 120ಡಿ, 406, 409, 420, 447, 465, 468, 471, ಸೆಕ್ಷನ್ 73, ಸೇರಿದಂತೆ ಹಲವು ಸೆಕ್ಷಅನ್ ಗಳಲ್ಲಿ ಪ್ರಕರಣ ದಾಖಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31-03-2022ರಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು, ಶ್ರೀರಾಮುಲು ಅವರು ಶಾಸಕರಿದ್ದಾರೆ ಎಂದು ನ್ಯಾಯಾಲಯಕ್ಕೆ ಹೋದಾಗ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆರೋಪಪಟ್ಟಿ ಆಧಾರದ ಮೇಲೆ ವಿಚಾರಣೆ ಮಾಡಲು ಅನುಮತಿ ನೀಡುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ: 'ಯಾರೋ ಕಟ್ಟಿದ ಗೂಡಿನಲ್ಲಿ ಹೋಗಿ ರಾಜಕಾರಣ ಮಾಡುವ ಸ್ಥಿತಿ ನನ್ನದಲ್ಲ'
ಈ ಆರೋಪಪಟ್ಟಿ ದಾಖಲಾದ ನಂತರ ಪ್ರಕರಣ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 30-03-2022ರಂದು ವರ್ಗಾವಣೆಯಾಗಿದೆ. ಕಳೆದ ತಿಂಗಳು 17ರಂದು ವಿಚಾರಣೆ ಇತ್ತು. ಈ ಪ್ರಕರಣದಲ್ಲಿ ಶ್ರೀರಾಮುಲು ಯಾವ ರೀತಿ ಅಧಿಕಾರ ಹಾಗೂ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಸ್ತಾಪವಾಗಿದೆ. ಈಗ ಆ ಜಮೀನಿನ ಬೆಲೆ 1 ಎಕರೆಗೆ 1 ಕೋಟಿಯಷ್ಟಾಗಿದ್ದು, ಸುಮಾರು 300 ಕೋಟಿಯಷ್ಟು ಅವ್ಯವಹಾರ ನಡೆದಿದೆ. ಸರ್ಕಾರ ಹಾಗೂ ಸಾರ್ವಜನಿಕ ಸ್ವತ್ತು ಲಪಟಾಯಿಸಲಾಗಿದೆ. ಪ್ರಕರಣ ಸಂಬಂಧ ಈಗ ಸಾಕ್ಷಿಗಳ ವಿಚಾರಣೆ ನಡೆಯುತ್ತಿದ್ದು, ಆರೋಪಿಯು ಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರದ ಪ್ರಭಾವ ಬಳಸಿ ಸಾಕ್ಷಿ ತಿರುಚುವ ಸಾಧ್ಯತೆ ಇದೆ. ಹೀಗಾಗಿ, ಲೋಕಾಯುಕ್ತ ಪೊಲೀಸರು ಬೇಲ್ ರದ್ದತಿಗೆ ಅರ್ಜಿ ಹಾಕಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರು ಮಾತೆತ್ತಿದರೆ ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳುತ್ತಾರೆ. ಸದ್ಯ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿನಲ್ಲಿದ್ದಾರೆ. ಆರೋಪಪಟ್ಟಿ ದಾಖಲಾಗಿರುವವರನ್ನು ಮಂತ್ರಿ ಮಂಡಲದಲ್ಲಿ ಹೇಗೆ ಮುಂದುವರಿಸುತ್ತೀರಿ?. ಹೀಗಾಗಿ, ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದಿಂದ ಒತ್ತಾಯ ಮಾಡುತ್ತೇವೆ. ಮಾಡದಿದ್ದರೆ ಬಳ್ಳಾರಿ ಹಂತದಲ್ಲಿ ನಮ್ಮ ನಾಯಕರು ಹೋರಾಟ ಮಾಡಲಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದರು.