ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳ ಪದನಾಮ ಬದಲಾವಣೆ ಮಾಡಿ ಆದೇಶಿಸಲಾಗಿದೆ.
ಕಳೆದ ಆರು ತಿಂಗಳಿಂದ ಸಚಿವಾಲಯದಲ್ಲಿ ನೆನೆಗುದಿಗೆ ಬಿದ್ದಿದ್ದ ಪದನಾಮ ಬದಲಾವಣೆ ಕಡತವನ್ನು ವಿಲೇವಾರಿ ಮಾಡಲಾಗಿದೆ. ಹೀಗಾಗಿ ಅನೇಕ ದಿನಗಳಿಂದ ಬಾಕಿ ಉಳಿದಿದ್ದ ಸಿಬ್ಬಂದಿ ಬೇಡಿಕೆಯನ್ನು ಈಡೇರಿಸಿದಂತಾಗಿದೆ.
ಈ ನಿರ್ಧಾರದಿಂದ ಎಂಟು ಹುದ್ದೆಗಳ ಪದನಾಮವನ್ನು ಮರು ನಾಮಕರಣ ಮಾಡಲಾಗಿದೆ. ನೌಕರರ ಸಂಘದಿಂದ ಪದನಾಮ ಬದಲಾವಣೆಗೆ ಎರಡು-ಮೂರು ಸಲ ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಪದಾಧಿಕಾರಿಗಳ ನಿಯೋಗ ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಯಾವ ಪದನಾಮ ಬದಲಾವಣೆ:
- ಕಿರಿಯ ಆರೋಗ್ಯ ಸಹಾಯಕ (ಪುರುಷ) - ಆರೋಗ್ಯ ನಿರೀಕ್ಷಣಾಧಿಕಾರಿ
- ಹಿರಿಯ ಆರೋಗ್ಯ ಸಹಾಯಕ (ಪುರುಷ) - ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ
- ಆರೋಗ್ಯ ಮೇಲ್ವಿಚಾರಕ - ಆರೋಗ್ಯ ಮೇಲ್ವಿಚಾರಣಾಧಿಕಾರಿ
- ಆರೋಗ್ಯ ಮೇಲ್ವಿಚಾರಕ (ಪತ್ರಾಂಕಿತ) - ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ
- ಕಿರಿಯ ಆರೋಗ್ಯ ಸಹಾಯಕಿ - ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ
- ಹಿರಿಯ ಆರೋಗ್ಯ ಸಹಾಯಕಿ - ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ
- ಜಿಲ್ಲಾ ಶುಶ್ರೂಷಣಾಧಿಕಾರಿ - ಜಿಲ್ಲಾ ಶುಶ್ರೂಷಣಾಧಿಕಾರಿ
- ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್ - ಕಿರಿಯ/ಹಿರಿಯ ವಿಕಿರಣ ಚಿತ್ರಣ ಅಧಿಕಾರಿ
ಭತ್ಯೆ ಕುರಿತು ಸಿಎಂ ಜತೆ ಚರ್ಚೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೋವಿಡ್ ಕರ್ತವ್ಯದಲ್ಲಿರುವ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಾದ ಶುಶ್ರೂಷಕರು, ಪ್ರಯೋಗಶಾಲೆ ತಂತ್ರಜ್ಞರು, ರೇಡಿಯಾಲಜಿ ಟೆಕ್ನಾಲಜಿಸ್ಟ್, ಆರೋಗ್ಯ ಸಹಾಯಕರು, ಫಾರ್ಮಾಸಿಸ್ಟ್, ವಾಹನ ಚಾಲಕರು ಮತ್ತು ಗ್ರೂಪ್ ಡಿ ನೌಕರರು ಕೂಡ ವಿಶೇಷ ಭತ್ಯೆ ಯೋಜನೆಯನ್ನು ತಮಗೂ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ.