ಬೆಂಗಳೂರು: ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಬರಬೇಕಾದ ಹಣಕಾಸು ಬರುತ್ತಿಲ್ಲ. ಇದರಿಂದ ನಿಗಮಗಳ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ಅಲ್ಲದೆ ಕೆಎಸ್ಆರ್ಟಿಸಿ ನೌಕರರ ಕೆಲಸದ ಪರಿಸ್ಥಿತಿ ಹದಗೆಟ್ಟಿದ್ದು, ಡ್ರೈವರ್, ಕಂಡಕ್ಟರ್ಸ್ 18 ಗಂಟೆಗಳ ಕಾಲ ದುಡಿಯುತ್ತಿದ್ದಾರೆ. ಹೀಗಾಗಿ ಸಾರಿಗೆ ಇಲಾಖೆ ಕಡೆ ಗಮನ ಕೊಡದ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಬದಲಾಯಿಸಿ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ಅನಂತ ಸುಬ್ಬರಾವ್ ಒತ್ತಾಯಿಸಿದರು.
ಶಾಂತಿನಗರದ ಬಸ್ ಡಿಪೋದಲ್ಲಿ ನಡೆಯುತ್ತಿರುವ ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಮಾತನಾಡಿದ ಅನಂತ್ ಸುಬ್ಬರಾವ್, ಉನ್ನತ ಅಧಿಕಾರಿಗಳ ಒತ್ತಡದಿಂದಾಗಿ ಟ್ರಾನ್ಸ್ಪೋರ್ಟ್ ದೊಡ್ಡ ದಂಧೆಯಾಗುತ್ತಿದೆ. ಒಂದು ವರ್ಷದಿಂದ ಡಿಸಿ ತಮ್ಮಣ್ಣ ಅವರು ಸಚಿವರಾದ ಮೇಲೆ ಈ ಭ್ರಷ್ಟಾಚಾರ ಹೆಚ್ಚಾಗಿದೆ ಎಂದರು. ಹೀಗಾಗಿ ಮುಖ್ಯಮಂತ್ರಿಗಳು ತಮ್ಮಣ್ಣ ಅವರನ್ನು ಬದಲಾಯಿಸಿ, ಸಮರ್ಥ ಸಚಿವರನ್ನು ತರಬೇಕೆಂದು ಒತ್ತಾಯಿಸಿದರು.
ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಪಾಸ್ ಹಣ ಎರಡೂವರೆ ಸಾವಿರ ಕೋಟಿ ರೂಪಾಯಿ ನಾಲ್ಕು ವರ್ಷದಿಂದ ಸರ್ಕಾರ ಕೊಟ್ಟಿಲ್ಲ. ಕೂಡಲೇ ಕೊಡಬೇಕು. ಒಂದು ಸಾವಿರ ಕೋಟಿ ರುಪಾಯಿ ನಾಲ್ಕು ನಿಗಮಗಳಿಗೆ ವರ್ಕಿಂಗ್ ಕ್ಯಾಪಿಟಲ್ ಹಣ ಕೊಟ್ಟಿಲ್ಲ. ಎಂಬಿ ಟ್ಯಾಕ್ಸ್ ಐನೂರು ಕೋಟಿ ರದ್ದತಿ, ನೂರೈವತ್ತು ಕೋಟಿ ಹೈವೇ ಟೋಲ್ ರದ್ದತಿಗೆ ಮನವಿ ಮಾಡಿದ್ದೆವು. ಆದ್ರೆ ಮಾಡಿಲ್ಲ. ಡಿಸೇಲ್ ಮೇಲಿನ ಸುಂಕವನ್ನು ಶೇ. 50ಕ್ಕೆ ಇಳಿಸಲು ತಿಳಿಸಿದ್ದೆವು. ಆದ್ರೆ ಇನ್ನೂ ಮಾಡಿಲ್ಲ. ನಾಲ್ಕು ನಿಗಮಗಳಿಂದ ಇಪ್ಪತ್ತು ವರ್ಷದಲ್ಲಿ 1723 ಕೋಟಿ ರೂಪಾಯಿ ನಷ್ಟವಾಗಿದೆ. 1600 ಕೋಟಿ ರೂಪಾಯಿ ಸಾಲವಿದೆ. ಹೀಗಾಗಿ ನಾಲ್ಕು ಕಾರ್ಪೋರೇಷನ್ಗಳನ್ನು ಒಂದು ಮಾಡಲು ತಿಳಿಸಿದ್ದೇವೆ ಎಂದರು.
ಮುಖ್ಯಮಂತ್ರಿಗಳು ಸಮಯ ತಿಳಿದುಕೊಂಡು, ಅಧಿಕಾರಿಗಳ ಜೊತೆ ಸಭೆ ನಡೆಸುವ ಭರವಸೆ ನೀಡಿದ್ದಾರೆ ಎಂದರು. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಹೆಚ್ಚು ನಷ್ಟವಾಗಿಲ್ಲ. ನಷ್ಟವಾಗುತ್ತಿರುವ ಬಗ್ಗೆ ಸಮಿತಿ ರಚಿಸಲು ತಮ್ಮಣ್ಣ ಹೇಳುತ್ತಾರೆ. ಆದ್ರೆ ನಮ್ಮನ್ನು ಕರೆದು ಮಾತಾಡಿಸೋದಿಲ್ಲ. ಕಳೆದ ತಿಂಗಳು ಇಪ್ಪತ್ತೆಂಟು ತಾರೀಕಿನಿಂದಲೇ ಪ್ರತಿಭಟನೆ ಆರಂಭಿಸಿದ್ದೇವೆ. ಉದ್ದೇಶ ಈಡೇರದ ಕಾರಣ ಬೆಂಗಳೂರು ಚಲೋ ಹಮ್ಮಿಕೊಂಡು ಉಪ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದರು.