ಬೆಂಗಳೂರು : ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರಕ್ಕೆ ಸಾರ್ವಜನಿಕ ಹಣ ಮತ್ತು ಜಾಗ ಬಳಕೆ ಮಾಡುವುದು ಸರಿಯಲ್ಲ. ಈ ಹಿಂದಿನ ಪ್ರಕರಣಗಳಲ್ಲಿ ಹೈಕೋರ್ಟ್ ಹಾಗೂ ಚುನಾವಣಾ ಆಯೋಗ ಇದನ್ನು ವಿರೋಧಿಸಿವೆ. ಹೀಗಾಗಿ, ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸವನ್ನು ಬದಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಹಾಗೂ ಎಐಸಿಸಿ ವಕ್ತಾರರಾದ ಬ್ರಿಜೇಶ್ ಕಾಳಪ್ಪ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಎಐಸಿಸಿ ವಕ್ತಾರರಾದ ಬ್ರಿಜೇಶ್ ಕಾಳಪ್ಪ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಇದರ ವಿನ್ಯಾಸ ಕಮಲದ ಆಕಾರದಲ್ಲಿದೆ. ಕಮಲ ಯಾವ ಪಕ್ಷದ ಚಿಹ್ನೆ ಎಂದು ಎಲ್ಲರಿಗೂ ಗೊತ್ತಿದೆ. ಪಕ್ಷದ ಚಿಹ್ನೆಗೆ ಪ್ರಚಾರ ನೀಡಲು ಸರ್ಕಾರದ ಹಣ ಬಳಕೆ ಮಾಡುವುದು ಸರಿಯಲ್ಲ. ಈ ವಿಚಾರವಾಗಿ ನಮ್ಮ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಈ ವಿನ್ಯಾಸ ನಿರ್ಮಾಣ ಕೂಡಲೇ ನಿಲ್ಲಿಸಬೇಕು ಹಾಗೂ ಇದನ್ನು ಬದಲಿಸಬೇಕು. ಸರ್ಕಾರದ ಹಣದಲ್ಲಿ ನಿಮ್ಮ ಪಕ್ಷದ ಪ್ರಚಾರ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಕಾಮನ್ ಕಾಸ್ ವರ್ಸಸ್ ಬಿಎಸ್‌ಪಿ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ 2016ರಲ್ಲಿ ಒಂದು ತೀರ್ಪು ಕೊಟ್ಟಿದೆ. ಬಿಎಸ್‌ಪಿಯು ತಮ್ಮ ಪಕ್ಷದ ಚಿಹ್ನೆ ಆನೆ ಆಕಾರದಲ್ಲಿ ಹಲವು ಪ್ರತಿಮೆ ನಿರ್ಮಾಣ ಮಾಡಿದ್ದಾಗ, ರಾಜಕೀಯ ಪಕ್ಷದ ಚಿಹ್ನೆ ಪ್ರಚಾರಕ್ಕೆ ತೆರಿಗೆದಾರರ ಹಣವನ್ನು ಬಳಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಇನ್ನು, ಚುನಾವಣಾ ಆಯೋಗವು 2016ರಲ್ಲಿ ಈ ವಿಚಾರವಾಗಿ ಒಂದು ನಿರ್ಣಯಕೈಗೊಂಡಿದೆ.
ಸಾರ್ವಜನಿಕ ಹಣ ಮತ್ತು ಜಾಗವನ್ನು ಬಳಸಿಕೊಂಡು ರಾಜಕೀಯ ಪಕ್ಷ ಅಥವಾ ಅದರ ಚಿಹ್ನೆಗೆ ಪ್ರಚಾರ ನೀಡಿದರೆ, ಅದು ಪಾರದರ್ಶಕ ಚುನಾವಣೆಗೆ ವಿರುದ್ಧವಾದುದ್ದು. 1968ರ ಚುನಾವಣಾ ಚಿಹ್ನೆ ಆದೇಶದ ಪ್ಯಾರಾ 16ರ ನಿಯಮಾವಳಿ ಉಲ್ಲಂಘನೆ ಮಾಡಿದರೆ ಆ ಪಕ್ಷ ತನ್ನ ಚುನಾವಣೆ ಚಿಹ್ನೆಯನ್ನೇ ಕಳೆದುಕೊಳ್ಳಲಿದೆ. ಹೀಗಾಗಿ, ಬಿಜೆಪಿ ಕೂಡಲೇ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕಮಲದ ವಿನ್ಯಾಸದಲ್ಲಿ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ನೀವು ಇದನ್ನು ಮುಂದುವರಿಸಿದರೆ ನೀವು ನಿಮ್ಮ ಚಿಹ್ನೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದರು.
ಕಾಂಗ್ರೆಸ್ ಆಗ್ರಹ : ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಆರೋಪ ಮಾಡಿರುವುದು ಕಾಂಗ್ರೆಸ್ ಪಕ್ಷದವರಲ್ಲ. ಈ ಟೆಂಡರ್ ಕರೆಯುವ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್ ಅವರು ಆರೋಪಿಸಿದ್ದಾರೆ. ಆದರೆ, ಸಚಿವ ಬೊಮ್ಮಾಯಿ ಅವರು ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಹೀಗಾಗಿ, ತನಿಖೆ ಅಗತ್ಯವಿಲ್ಲ ಎಂದಿದ್ದಾರೆ. ವಿಧಾನ ಪರಿಷತ್ ಸದಸ್ಯರೇ ಈ ಆರೋಪ ಮಾಡಿರುವ ಹಿನ್ನೆಲೆ ಜಂಟಿ ಸದನ ಸಮಿತ ರಚಿಸಬೇಕು ಎಂಬುದು ಕಾಂಗ್ರೆಸ್ ಆಗ್ರಹವಾಗಿದೆ. ದೂರವಾಣಿ ಕದ್ದಾಲಿಕೆ ವಿಚಾರವಾಗಿ ಶಾಸಕ ಅರವಿಂದ್ ಬೆಲ್ಲದ್ ಅವರು ಆರೋಪಿಸಿದ್ದಾರೆ.
ಈ ಪ್ರಕರಣವನ್ನು ಬೊಮ್ಮಾಯಿ ಅವರು ನಗರ ಪೊಲೀಸ್ ಆಯುಕ್ತರಿಗೆ ವಹಿಸಿದ್ದಾರೆ. ಈ ಹಿಂದೆ ಇದೇ ದೂರವಾಣಿ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ನನಗೆ 2019ರಲ್ಲಿ ನೋಟಿಸ್ ಜಾರಿ ಮಾಡಿ 16 ತಾಸುಗಳ ಕಾಲ ವಿಚಾರಣೆ ನಡೆಸಿತ್ತು. ಆಗ ನಾನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಹುದ್ದೆಯಲ್ಲಿರಲಿಲ್ಲ. ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಈಗಲೂ ಅದರ ವಿಚಾರಣೆ ನಡೆಯುತ್ತಲೇ ಇದೆ.
ಆಗ ಕುಮಾರಸ್ವಾಮಿ ಅವರ ವಿಚಾರಣೆ ನಡೆದಿದೆಯಾದರೆ, ಈಗ ಯಡಿಯೂರಪ್ಪನವರ ವಿಚಾರಣೆ ಯಾಕಿಲ್ಲ? ಈ ವಿಚಾರಣೆಯನ್ನು ಸಿಬಿಐಗೆ ಯಾಕೆ ವಹಿಸಿಲ್ಲ? ಆಗ ಸಿಕ್ಕಸಿಕ್ಕವರ ವಿಚಾರಣೆ ಮಾಡುತ್ತಿದ್ದ ಸಿಬಿಐ, ಈಗ ಯಾಕೆ ಮಾಡುತ್ತಿಲ್ಲ? ಹೀಗಾಗಿ, ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ರಮೇಶ್ ಪ್ರಯತ್ನ : ಈಗ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಚಿವರಾಗಲು ಪ್ರಯತ್ನಿಸುತ್ತಿದ್ದಾರೆ. ಇವತ್ತಿನ ಪತ್ರಿಕೆಗಳಲ್ಲಿ ಬಂದಿರುವ ವರದಿ ಪ್ರಕಾರ, ತಮಿಳುನಾಡಿನ ಮಾಜಿ ಮಂತ್ರಿಯೊಬ್ಬರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. 376 ಪ್ರಕರಣದಲ್ಲಿ ಯಾವುದೇ ಆರೋಪಿ ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವ ಉದಾಹರಣೆ ಇಲ್ಲ. ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸದೇ, ಅವರನ್ನು ಸ್ವತಂತ್ರವಾಗಿ ಬಿಟ್ಟು ಅವರು ಮತ್ತೆ ಸಚಿವರಾಗಲು ಮುಂದಾಗಿದ್ದಾರೆ ಎಂದರೆ, ಇದು ಕೇವಲ ಆ ಹೆಣ್ಣಿನ ಮೇಲಾದ ಬಲತ್ಕಾರವಲ್ಲ. ಇಡೀ ಕಾನೂನು ವ್ಯವಸ್ಥೆ ಮೇಲಿನ ಬಲತ್ಕಾರವಾಗುತ್ತದೆ. ಈವರೆಗೂ ಅವರ ಬಂಧನವಾಗದಿರುವುದು ದೊಡ್ಡ ತಪ್ಪು, ಇನ್ನಾದರೂ ತನಿಖಾ ಸಂಸ್ಥೆಗಳು ಬಂಧನ ಮಾಡಿ ವಿಚಾರಣೆ ನಡೆಸಬೇಕು’ ಎಂದು ಆಗ್ರಹಿಸಿದರು.
ಶಾಸಕ ಎನ್.ಎ ಹ್ಯಾರೀಸ್ ಅವರು ಮಾತನಾಡಿ, ‘2005ರ ಕಾಯ್ದೆ ಅನ್ವಯ ವಿಪತ್ತು ನಿರ್ವಹಣಾ ನಿಧಿಯ ಹಣವನ್ನು ಈ ವಿಪತ್ತು ನಿರ್ವಹಣೆಗಾಗಿ ಬಳಸಿಕೊಳ್ಳಬೇಕು. ಈ ಸಮಯದಲ್ಲಿ ಅದನ್ನು ಬಳಸಿಕೊಳ್ಳದಿದ್ದರೆ ಮತ್ಯಾವಾಗ ಬಳಸಿಕೊಳ್ಳಲಾಗುತ್ತದೆ? ಕೇಂದ್ರ ಸರ್ಕಾರ ಸಂಪನ್ಮೂಲದ ಕೊರತೆ ನೆಪ ಹೇಳಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ತಿಳಿಸಿದೆ. ಈ ಸರ್ಕಾರಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ಯೋಗ್ಯತೆ ಇಲ್ಲ ಎಂದಾದರೆ ಇವರಿಗೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಟೀಕಿಸಿದರು.
ಕೋವಿಡ್ ಅಲೆ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿದ್ದರೂ ಸಾವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಕೇಂದ್ರ ಸರ್ಕಾರ ಕೋವಿಡ್‌ನಿಂದ ಸತ್ತವರಿಗೆ ವಿಪತ್ತು ನಿರ್ವಹಣೆ ಕಾಯ್ದೆ ಅನ್ವಯ 4 ಲಕ್ಷ ರೂ. ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿರುವುದು ಸರಿಯಲ್ಲ. ಈ ವಿಪತ್ತಿನ ಕಾಲದಲ್ಲಿ ಹಣ ನೀಡದಿದ್ದರೆ ಆ ನಿಧಿಯನ್ನು ಬಳಸುವುದಾದರೂ ಯಾವಾಗ?. ಹೀಗಾಗಿ, ಕೇಂದ್ರ ಸರ್ಕಾರ ಬಡ ಹಾಗೂ ಮಧ್ಯಮವರ್ಗದವರಿಗಾದರೂ ಪರಿಹಾರ ನೀಡಲೇಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ 1 ಲಕ್ಷ ರೂ. ಘೋಷಿಸಿದ್ದಾರೆ. ಈ ಸಮಯದಲ್ಲಿ ಅನೇಕ ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಯೇ ಮೃತಪಟ್ಟಿದ್ದು ಅವರ ಸ್ಥಿತಿ ಬೀದಿಗೆ ಬಿದ್ದಿದೆ. ಈ ಸಮಯದಲ್ಲಿ ಜನರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕಾಗಿದೆ. ಆದರೆ, ಎಲ್ಲರಿಗೂ ಆಗದಿದ್ದರೂ ಬಡ ಹಾಗೂ ಮಧ್ಯಮವರ್ಗದವರಿಗೆ ನೀಡಲೇಬೇಕು’ ಎಂದು ಒತ್ತಾಯಿಸಿದರು.
ಅತಿ ಕಡಿಮೆ ಲಸಿಕೆ ವಿತರಿಸಿದ ದೇಶ ಭಾರತ : ಇಡೀ ಪ್ರಪಂಚದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಲಸಿಕೆ ವಿತರಣೆ ಮಾಡಿರುವ ದೇಶ ಎಂದರೆ ಅದು ಭಾರತ. ವಿಶ್ವದ ಇತರೆ ಎಲ್ಲ ರಾಷ್ಟ್ರಗಳು ತಮ್ಮ ಜನರಿಗೆ ಬಹುತೇಕ ಲಸಿಕೆ ಪೂರ್ಣವಾಗಿ ವಿತರಣೆ ಮಾಡಿವೆ. ರಾಜ್ಯದ 7 ಕೋಟಿ ಜನರಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡಲು ಖರ್ಚಾಗುವುದು ಕೇವಲ 1750 ಕೋಟಿ ಮಾತ್ರ. 2 ಲಕ್ಷ ಕೋಟಿ ರೂ. ಬಜೆಟ್ ಇರುವ ರಾಜ್ಯಕ್ಕೆ ಈ ಮೊತ್ತ ನೀಡುವುದು ಕಷ್ಟವೇ? ಇಂದು ಯೋಗ ದಿನ ಅಂಗವಾಗಿ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ನೀಡುತ್ತಿವೆ.
ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇವತ್ತು ಒಂದು ದಿನ ನೀಡಲು ಸಾಧ್ಯವಿದೆ ಎಂದಾದರೆ, ಉಳಿದ ದಿನ ನೀಡಲು ಯಾಕೆ ಆಗುವುದಿಲ್ಲ. ಇದೇ ರೀತಿ 100 ದಿನಗಳ ಕಾಲ ಲಸಿಕೆ ನೀಡಿದರೆ ರಾಜ್ಯದ ಎಲ್ಲ ಜನರಿಗೂ ಲಸಿಕೆ ಪೂರ್ಣವಾಗಿ ನೀಡಬಹುದಲ್ಲವೇ. ಸರ್ಕಾರ ಲಸಿಕೆ ನೀಡಬಹುದು ಎಂದು ತೋರಿಸಿಕೊಟ್ಟಿದೆ. ಆದರೂ ಜನರಿಗೆ ಲಸಿಕೆ ನೀಡದೇ ತನ್ನ ಅಸಮರ್ಥತೆಯನ್ನು ಪ್ರದರ್ಶಿಸುತ್ತಿದೆ’ ಎಂದರು.