ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ನಡೆಯುತ್ತಿರುವ 21ನೇ ಚಿತ್ರಸಂತೆಗೆ ಜನಸಾಗರ ಹರಿದು ಬರುತ್ತಿದೆ. ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಆಯೋಜಿಸಲಾಗಿರುವ ಚಿತ್ರಸಂತೆ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 1,500 ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರ ಸಾವಿರಾರು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಭಾನುವಾರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಕುಮಾರಕೃಪಾ ರಸ್ತೆ ಹಾಗೂ ಹರೇ ಕೃಷ್ಣ ರಸ್ತೆಯ ಉಕ್ಕಿನ ಕೆಳಸೇತುವೆ ಭಾಗದ ಶಿವಾನಂದ ವೃತ್ತದಿಂದ ಗುರುರಾಜ ಜಂಕ್ಷನ್ ಬಳಿಯ ನವಕರ್ನಾಟಕ ಪಬ್ಲಿಕೇಷನ್ ಕಟ್ಟಡದವರೆಗಿನ ಉತ್ತರ ಭಾಗದ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನ ಸಂಚಾರವನ್ನು ರೇಸ್ ವ್ಯೂ ಜಂಕ್ಷನ್ ಮೂಲಕ ಕೆ ಕೆ ರಸ್ತೆ ಪ್ರವೇಶವನ್ನೂ ಸಹ ನಿರ್ಬಂಧಿಸಲಾಗಿದೆ.
ಎಲ್ಲೆಲ್ಲಿ ಯಾವ ವಾಹನಗಳ ನಿಲುಗಡೆಗೆ ಅವಕಾಶ: ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ - ನಾಲ್ಕು ಚಕ್ರಗಳ ವಾಹನಗಳಿಗೆ, ಕ್ರೆಸೆಂಟ್ ರಸ್ತೆ, ಗುರುರಾಜ ಕಲ್ಯಾಣ ಮಂಟಪದಿಂದ ಹೋಟೆಲ್ ಜನಾರ್ದನವರೆಗೆ ರಸ್ತೆಯ ಪಶ್ಚಿಮಕ್ಕೆ - ನಾಲ್ಕು ಚಕ್ರ ವಾಹನಗಳು, ಸರ್ಕಾರಿ ವಸತಿ ಗೃಹ ಕ್ರೆಸೆಂಟ್ ರಸ್ತೆ ಬಳಿ - ದ್ವಿಚಕ್ರ ವಾಹನಗಳು, ರೇಸ್ ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ, ರಸ್ತೆಯ ಪೂರ್ವ ಭಾಗಕ್ಕೆ - ನಾಲ್ಕು ಚಕ್ರ ವಾಹನಗಳು ಸೇವಾದಳ ಶಾಲೆ ಆವರಣ, ಕ್ರಸೆಂಟ್ ಕ್ರಾಸ್ ರಸ್ತೆ, - ನಾಲ್ಕು ಚಕ್ರದ ವಾಹನಗಳು ಹಾಗೂ ಬಿಡಿಎ ಆವರಣ ನಿಲುಗಡೆ ಸ್ಥಳದಲ್ಲಿ ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಹಾಲು, ರಾಸಾಯನಿಕಮುಕ್ತ 'ಸಿರಿಧಾನ್ಯ ಐಸ್ ಕ್ರೀಂ' ಇಲ್ಲಿದೆ ನೋಡಿ