ಬೆಂಗಳೂರು : ವಿಕಾಸಸೌಧದಲ್ಲಿ ಸಂಧಾನ ವಿಫಲವಾದ ಹಿನ್ನೆಲೆ ಸಾರಿಗೆ ನೌಕರರು ಮುಷ್ಕರ ಮುಂದುವರೆಸುವುದಕ್ಕೆ ಮುಂದಾಗಿದ್ದಾರೆ. ಸಿಬ್ಬಂದಿಗೆ ಖಾಸಗಿ ಬಸ್ ಮಾಲೀಕರ ಒಕ್ಕೂಟ ಕೂಡ ಈಗಾಗಲೇ ಬೆಂಬಲ ವ್ಯಕ್ತಪಡಿಸಿದೆ.
ಸಾರಿಗೆ ಸಚಿವರ ಪ್ರತಿಷ್ಠೆಯಾಗಿ ತೆಗೆದುಕೊಂಡ ಪರಿಣಾಮ ಹೋರಾಟ ಈ ಹಂತ ತಲುಪಿದೆ ಎಂಬ ಕೂಗು ಈಗಾಗಲೇ ಪ್ರತಿಭಟನೆಯಲ್ಲಿ ವ್ಯಕ್ತವಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಹಾಗೂ ಇಂದಿನ ಬಂದ್ ಬಗ್ಗೆ ಸಾರಿಗೆ ಒಕ್ಕೂಟಗಳ ಅಧ್ಯಕ್ಷ ಚಂದ್ರಶೇಖರ್ ವಿಡಿಯೋ ಬಿಡುಗಡೆ ಮಾಡಿದ್ದು, ಸಿಬ್ಬಂದಿಗೆ ಬಂದ್ ಮುಂದುವರೆಸುವಂತೆ ಮನವಿ ಮಾಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ನನ್ನ ಸರ್ಕಾರದ ಜಿದ್ದಾಜಿದ್ದಿಗೂ ನೀವು ಸಾರಿಗೆ ಸಿಬ್ಬಂದಿ ಬಲಿಯಾಗಬಾರದು. ಒಂದು ನಿಯೋಗ ಹೋಗಿ ಮಾತನ್ನಾಡಿಕೊಂಡು ಬನ್ನಿ ಅಂತಾ ಹೇಳಿದ್ದರು. ವಿಕಾಸಸೌಧದ ಸಂಧಾನ ಸಭೆಯಲ್ಲಿ ನಮ್ಮ ಮೊದಲ ಬೇಡಿಕೆಯಾದ ಸರ್ಕಾರಿ ನೌಕರರನ್ನಾಗಿ ಮಾಡುವ ಬಗ್ಗೆ ಯಾವುದೇ ಭರವಸೆ ಸಿಕ್ಕಿಲ್ಲ.
ವೇತನ ಆಯೋಗದ ವಿಚಾರದಲ್ಲೂ ಯಾವುದೇ ಸ್ಪಷ್ಟತೆ ಇರಲಿಲ್ಲ. ಸುಮ್ಮನೆ ಬೇರೆ ವಿಚಾರಗಳನ್ನು ಸಭೆಯಲ್ಲಿ ಮಾತನಾಡಲಾಯಿತು. ನಾನು ಎಷ್ಟೇ ಒತ್ತಾಯಿಸಿದರೂ ನಮ್ಮ ಪ್ರಮುಖ ಬೇಡಿಕೆಗಳತ್ತ ಪ್ರತಿಕಿಯಿಸಲಿಲ್ಲ ಎಂದಿದ್ದಾರೆ. ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ ಹೊರತು, ಯಾವುದೇ ಲಿಖಿತ ಆಶ್ವಾಸನೆ ಕೊಟ್ಟಿಲ್ಲ. ನಾವು ಒಕ್ಕೂಟದಿಂದ ಎಲ್ಲೂ ಒಪ್ಪಿರುವುದಾಗಿ ಸಹಿ ಮಾಡಿಲ್ಲ, ಬರಿ ಕಾಗದದ ಮೇಲೆ ಪ್ರಕಟಣೆ ಕೊಟ್ಟಿರುವುದು ಬಿಟ್ಟರೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
ಓದಿ :ಸರ್ಕಾರ, ಸಾರಿಗೆ ನೌಕರರ ಜಟಾಪಟಿ: ಸಿಎಂ ನಿವಾಸದಲ್ಲಿ ತುರ್ತುಸಭೆ
ಸ್ವಾತಂತ್ರ್ಯ ಉದ್ಯಾನವನಕ್ಕೆ ಹೋಗಿ ಪ್ರತಿಭಟನಾ ಸಿಬ್ಬಂದಿಯ ಜೊತೆ ಮಾತನಾಡಿ ತಿಳಿಸುವುದಾಗಿ ನಾನು ಹೇಳಿದ್ದೆ, ನಾನು ಕೋಡಿಹಳ್ಳಿ ಚಂದ್ರಶೇಖರ್ ಅವರ ಜೊತೆ ಮಾತನಾಡಿ ತಿಳಿಸುವುದಾಗಿ ಮಾಧ್ಯಮಗಳಿಗೂ ಮಾಹಿತಿ ನೀಡಿದ್ದೆ. ಸರ್ಕಾರ ನಮ್ಮನ್ನು ಹಣಿಯಲು ಪ್ರಯತ್ನಿಸುತ್ತಿದೆ. ದಯವಿಟ್ಟು ಸಾರಿಗೆ ಸಿಬ್ಬಂದಿ ಇದಕ್ಕೆಲ್ಲ ಜಗ್ಗಬಾರದು. ಮುಷ್ಕರವನ್ನು ಮುಂದುವರಿಸಿ. ಇದು ಕೊನೆಯ ಅವಕಾಶವಾಗಿದ್ದು, ಸರ್ಕಾರಕ್ಕೆ ಇನ್ನೂ ಬಿಗಿ ಪಟ್ಟನ್ನು ಹಾಕಬೇಕು ಎಂದಿದ್ದಾರೆ.
ಬೆಳಗ್ಗೆ 6 ಗಂಟೆಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಂದು ಸೇರಬೇಕೆಂದು ಮನವಿ ಮಾಡುತ್ತೇನೆ, ಉಪವಾಸ ಸತ್ಯಾಗ್ರಹ ಇರುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ ಎಂದು ಮನವಿ ಮಾಡಿದ್ದಾರೆ. ಚಂದ್ರು ಕಾಣೆಯಾಗಿದ್ದಾನೆ ಎಂದು ಮಾಧ್ಯಮಗಳಲ್ಲಿ ಬರುತ್ತಿದ್ದು, ಯಾರು ಅದನ್ನ ನಂಬಬಾರದು, ನನ್ನ ಒಬ್ಬನ ಸ್ವಾರ್ಥ ಇಲ್ಲಿಲ್ಲ, 1.30 ಲಕ್ಷ ಕುಟುಂಬಗಳ ಭವಿಷ್ಯಕ್ಕೆ ಯೋಚುಸುತ್ತಿದ್ದೇನೆ, ಯಾವುದೇ ಊಹಾಪೋಹಗಳಿಗೆ ಕಿವಿ ಗೊಡಬೇಡಿ ಎಂದಿದ್ದಾರೆ.
ಕಾರ್ಮಿಕರ ಸಮ್ಮುಖದಲ್ಲಿ ಸಭೆಯಲ್ಲಿ ಏನು ನಡೆಯಿತು ಎಂದು ಹೇಳಿದಾಗ, ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ನಾಳೆಯೂ ಬಂದ್ ಮುಂದುವರೆಯುತ್ತದೆ. ಶಾಂತಿಯುತ ಬಂದ್ ಮುಂದುವರೆಸಿ, ಯಾವುದೇ ಹಲ್ಲೆಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ. ನಾವು ಪ್ರತಿಭಟನೆ ನಿಲ್ಲಿಸಿದ್ರೆ 20 ರಿಂದ 25 ವರ್ಷ ಹಿಂದೆ ಹೋಗುತ್ತೇವೆ. ನಮ್ಮ ನಮ್ಮ ಕುಟುಂಬಗಳ ಮಕ್ಕಳ ಭವಿಷ್ಯ ಯೋಚನೆ ಮಾಡಿ, ನಾಳೆಯೂ ಬಂದ್ ಮುಂದುವರೆಸುವಂತೆ ಸಾರಿಗೆ ಸಿಬ್ಬಂದಿಗೆ ಕರೆ ನೀಡಿದ್ದಾರೆ.