ಬೆಂಗಳೂರು: ಪೂರ್ವ ಅಲೆಗಳ ಪ್ರಭಾವದಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರೆಯುವ ಸಾಧ್ಯತೆ ಇದ್ದು, ಮಳೆಯೂ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಓದಿ: ಇನ್ಮುಂದೆ ನಿಜವಾದ ರಾಜಕಾರಣ ಆರಂಭವಾಗಲಿದೆ: ನಿಖಿಲ್ ಕುಮಾರಸ್ವಾಮಿ
ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದು, ಸೂರ್ಯನ ಕಿರಣ ಬೀಳುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಉಷ್ಣಾಂಶ ಇಳಿಕೆ ಯಾಗಬಹುದು. ಗರಿಷ್ಠ ಉಷ್ಣಾಂಶ 24 ರಿಂದ 26 ಡಿಗ್ರಿ, ಕನಿಷ್ಠ ಉಷ್ಣಾಂಶ 16 ರಿಂದ 18 ಡಿಗ್ರಿ ದಾಖಲಾಗಬಹುದು ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಮುಂದಿನ ಮೂರ್ನಾಲ್ಕು ದಿವಸ ಮಳೆಯಾಗುವ ಸಾಧ್ಯತೆ ಇದ್ದು, ಶೀತ ವಾತಾವರಣ ಇನ್ನೂ ಮೂರು ನಾಲ್ಕು ದಿನ ಇರಬಹುದು. ತಂಪು ವಾತಾವರಣದಿಂದ ಶೀತ, ಜ್ವರ ಮತ್ತು ಕೋವಿಡ್ ಹೆಚ್ಚಾಗಬಹುದು ಎಂದು ಎಚ್ಚರಿಸಿದರು.
ದಕ್ಷಿಣ ಒಳನಾಡಿನಲ್ಲಿ ಇವತ್ತು, ನಾಳೆ ಮಳೆಯಾಗಬಹುದು. ಕರಾವಳಿ ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಮಳೆ ಆಗಬಹುದು. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ. ನಾಲ್ಕೈದು ದಿವಸ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಹೆಚ್ಚಿದೆ ಎಂದು ತಿಳಿಸಿದರು. ಬೀದರ್, ಬಿಜಾಪುರ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.