ಆನೇಕಲ್ (ಬೆಂಗಳೂರು): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಚೈತ್ರಾ ಮೇಲೆ ಆಫ್ರಿಕನ್ ಮಹಿಳಾ ಕೈದಿಗಳಿಂದ ಹಲ್ಲೆಯಾಗಿದೆ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಷ್ಟ್ರಗೀತೆ ವಿಚಾರಕ್ಕೆ ನಡೆದ ಜಗಳದಲ್ಲಿ ಚೈತ್ರಾ ಮೇಲೆ ಆಫ್ರಿಕನ್ ಮಹಿಳಾ ಕೈದಿಗಳಿಂದ ಹಲ್ಲೆ ನಡೆದಿದೆ.
ಇಂದು ಮಧ್ಯಾಹ್ನ ಮಹಿಳಾ ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲಿ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಕೈದಿಗಳು ಮತ್ತು ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಫ್ರಿಕನ್ ಮಹಿಳಾ ಕೈದಿಗಳು ಚೈತ್ರಾ ಮತ್ತು ಮೂವರು ಸ್ಥಳೀಯ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರಿಗೆ ಚೈತ್ರಾ ದೂರು ನೀಡಿದ್ದಾರೆ. ಹಲ್ಲೆ ಬಳಿಕ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಕರೆ ಮಾಡಿ ಚೈತ್ರಾ ನೋವು ತೋಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಘಟನೆಯ ಸಂಪೂರ್ಣ ವಿವರ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.
ಉದ್ಯಮಿ ಗೋವಿಂದ್ ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಿಸಿಬಿ ಆರೋಪಿಗಳ ವಿರುದ್ಧ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ತನಿಖೆಯನ್ನು ಸಿಸಿಬಿ ಮುಕ್ತಾಯಗೊಳಿಸಿದೆ.
ಇದನ್ನೂ ಓದಿ: ಚೈತ್ರಾ ವಂಚನೆ ಪ್ರಕರಣ: ಚಿಕ್ಕಮಗಳೂರಿಗೆ ಗಗನ್ ಕಡೂರು ಕರೆತಂದು ಸ್ಥಳ ಮಹಜರು ನಡೆಸಿದ ಸಿಸಿಬಿ ಪೊಲೀಸರು
ಪ್ರಕರಣದ ಪ್ರಮುಖ ಆರೋಪಿ ಆಗಿರುವ ಚೈತ್ರಾ, ಗಗನ್, ಹಾಲಶ್ರೀ ಸ್ವಾಮೀಜಿ, ರಮೇಶ್, ಪ್ರಜ್ವಲ್, ಶ್ರೀಕಾಂತ್, ಪ್ರಸಾದ್ ಬೈಂದೂರು ಸೇರಿ 9 ಮಂದಿ ಆರೋಪಿಗಳ ವಿರುದ್ಧ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಬಿಜೆಪಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರು 5 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಚೈತ್ರಾ ವಿರುದ್ಧ ಗೋವಿಂದಬಾಬು ಎಂಬುವವರು ದೂರು ನೀಡಿದ್ದರು.
ಈ ಸಂಬಂಧ ತನಿಖೆ ನಡೆಸಿದ ಸಿಸಿಬಿ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಚೈತ್ರಾ, ಗಗನ್, ದೇವರಾಜ್, ರಮೇಶ್, ಹಾಗೂ ಶ್ರೀಕಾಂತ್ನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದರೆ, ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಒಡಿಶಾದಲ್ಲಿ ಬಂಧಿಸಿ ಕರೆತರಲಾಗಿತ್ತು. ತನಿಖೆಯಲ್ಲಿ ಉದ್ಯಮಿಗೆ ಉದ್ದೇಶಪೂರ್ವಕ ಹಾಗೂ ವ್ಯವಸ್ಥಿತವಾಗಿ ಸಂಚು ರೂಪಿಸಿ ವಂಚಿಸಿರುವ ಸಾಕ್ಷ್ಯಾಧಾರಗಳು ಸಿಕ್ಕಿದ್ದವು. ಹಣ ಪಡೆದಿರುವ ಬ್ಯಾಂಕ್ ಸ್ಟೇಟ್ಮೆಂಟ್ ಸೇರಿದಂತೆ ಇನ್ನಿತರ ಡಿಜಿಟಲ್ ಸಾಕ್ಷ್ಯಗಳು ಲಭ್ಯವಾಗಿದ್ದವು. ಅಲ್ಲದೇ, ಟಿಕೆಟ್ ವಿಚಾರವಾಗಿ ಹಣ ಪಡೆಯಲು ನಿರಂತರವಾಗಿ ಉದ್ಯಮಿಯೊಂದಿಗೆ ಫೋನ್ ಸಂಪರ್ಕದಲ್ಲಿರುವುದು ಹಾಗೂ ವೈಯಕ್ತಿಕವಾಗಿ ಭೇಟಿ ಮಾಡಿರುವುದು ತಿಳಿದುಬಂದಿತ್ತು. ಆರೋಪಿಗಳು ಒಳಸಂಚು ನಡೆಸಿ ವಂಚಿಸಿರುವುದು ತನಿಖೆ ವೇಳೆ ಬಯಲಾಗಿತ್ತು.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2.5 ಕೋಟಿ ವಂಚನೆ ಆರೋಪ: ಚೈತ್ರಾ ಮಾದರಿ ಮತ್ತೊಂದು ಕೇಸ್ ಬೆಳಕಿಗೆ