ಬೆಂಗಳೂರು: ಬಾಡಿಗೆ ಮನೆ ಕೇಳುವ ಸೋಗಿನಲ್ಲಿ ಮನೆಯೊಂದರ ಬಳಿ ಮಹಿಳೆ ಹಾಕಿಕೊಂಡಿದ್ದ ಸರವನ್ನು ಇಬ್ಬರು ಅಪರಿಚಿತರು ಎಗರಿಸಿದ್ದು ಬಳಿಕ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದಾಗ ಸರದ ಅಸಲಿಯತ್ತು ಬಯಲಾಗಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಅಚ್ಚರಿ ಅಂದ್ರೆ ಸರಗಳ್ಳತನವಾಗುವ ತನಕ ಮಹಿಳೆಗೆ ತಾನು ಹಾಕಿಕೊಂಡಿದ್ದ ಸರ ಚಿನ್ನವೆಂದೇ ನಂಬಿದ್ದಳು. ಇಬ್ಬರು ಆರೋಪಿಗಳನ್ನು ಬಂಧಿಸಿ ಸರ ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ ಅದು ನಕಲಿ ಚಿನ್ನ ಎಂದು ತಿಳಿದಿದ್ದೆ. ಈ ವೇಳೆ ಖದೀಮರ ಜೊತೆಗೆ ಮಹಿಳೆಯೂ ಕಕ್ಕಾಬಿಕ್ಕಿಯಾಗಿದ್ದಾಳೆ.
ಕದ್ದ ಸರವನ್ನು ಗಿರವಿ ಅಂಗಡಿಯೊಂದರಲ್ಲಿ ಮಾರಾಟ ಮಾಡಲು ಮುಂದಾದಾಗ ರೋಲ್ಡ್ ಗೋಲ್ಡ್ ಎಂಬ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಅನುಮಾನ ಬಂದು ಗಿರವಿ ಅಂಗಡಿಯವರು ಪೊಲೀಸರಿಗೆ ತಿಳಿಸುವಷ್ಟರಲ್ಲೇ ಸರಗಳ್ಳರು ಎಸ್ಕೇಪ್ ಆಗಿದ್ದರು.
ಸಂತೋಷ್ ಹಾಗೂ ಜೈ ಕುಮಾರ್ ಈಗ ಸಿಕ್ಕಿಬಿದ್ದಿರುವ ಆರೋಪಿಗಳು. ಜ.13 ರಂದು ಮೈಕೋ ಲೇಔಟ್ ನಲ್ಲಿ ಇಬ್ಬರು ಆರೋಪಿಗಳು ಸುನಿತಾ ಎಂಬುವರ ಮನೆ ಬಳಿ ಬಾಡಿಗೆ ಮನೆ ಕೇಳುವ ಸೋಗಿನಲ್ಲಿ ಮಾತನಾಡಿಸಿದ್ದಾರೆ. ಮನೆ ಖಾಲಿ ಇಲ್ಲ ಎಂದು ಹೇಳಿ ಅಂಗಡಿಗೆ ಹೋಗಿ ಹಾಲು ತೆಗೆದುಕೊಂಡು ಮನೆಗೆ ಹಿಂತಿರುಗಿದಾಗ ಈಕೆಯನ್ನು ಗುರಿಯಾಗಿಸಿಕೊಂಡು ಹಿಂಬದಿಯಿಂದ ಸರಗಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದರು. ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಗಂಡ ಕೊಟ್ಟಿದ್ದು ಅಸಲಿ ಚಿನ್ನವಲ್ಲ ನಕಲಿ!
ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಸರ ಕಳೆದುಕೊಂಡ ಮಹಿಳೆಯನ್ನು ಠಾಣೆಗೆ ಕರೆಯಿಸಿಕೊಂಡಿದ್ದಾರೆ. ತಮ್ಮ ಬಳಿಯಿದ್ದ ಸರವು ನಕಲಿ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಗಂಡ ಸಾಯುವ ಮುನ್ನ ಮಾಂಗಲ್ಯ ಸರ ಗಿಫ್ಟ್ ಕೊಟ್ಟಿದ್ದರು. ನಾನು ಸಹ ಆ ಸರ ಚಿನ್ನದ್ದೇ ಎಂದು ಭಾವಿಸಿದ್ದೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.