ಬೆಂಗಳೂರು: ಮೋಜಿನ ಜೀವನ ಸಾಗಿಸಲು ಬೆಂಗಳೂರಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಕೊಪ್ಪಳ ಮೂಲದ ವಿದ್ಯಾರ್ಥಿ ಸೇರಿ ಇಬ್ಬರು ಸರಗಳ್ಳರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಎಂಬ ಆರೋಪಿ ಸಿಕ್ಕಿಬಿದ್ದವನು. ಮತ್ತೊಬ್ಬನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಾಪರಾಧಿ ಆಗಿದ್ದಾನೆ. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಒಂಟಿ ಮಹಿಳೆಯರೇ ಟಾರ್ಗೆಟ್: ಆರೋಪಿ ಸುರೇಶ್ ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಸಹಜವಾಗಿ ಎಲ್ಲ ಏರಿಯಾ ಅರಿತಿದ್ದ ಈತನು ಸುಲಭವಾಗಿ ಹಣ ಸಂಪಾದನೆಗೆ ಸರಗಳ್ಳತನದ ಸಂಚು ರೂಪಿಸಿದ್ದನು. ತನ್ನದೇ ಊರಿನ ಪರಿಚಯಸ್ಥನಾಗಿದ್ದ 10ನೇ ತರಗತಿ ವಿದ್ಯಾರ್ಥಿಯನ್ನು ಪುಸಲಾಯಿಸಿ ನಗರಕ್ಕೆ ಕರೆತಂದಿದ್ದ. ಒಂದೇ ಬೈಕ್ನಲ್ಲಿ ತೆರಳಿ ಒಂಟಿಯಾಗಿ ಓಡಾಡುವ ವೃದ್ಧೆಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು. ಕೃತ್ಯವೆಸಗಿದ ಬಳಿಕ ಊರಿಗೆ ಹೋಗಿ ತಲೆಮರೆಸಿಕೊಳ್ಳುತ್ತಿದ್ದರು. ಕೆಲ ತಿಂಗಳ ಬಳಿಕ ಮತ್ತೆ ನಗರಕ್ಕೆ ಬಂದು ಅಪರಾಧ ಕೃತ್ಯವೆಸಗುತ್ತಿದ್ದರು.
ಐದು ಸರಗಳ್ಳತನದಲ್ಲಿ ಭಾಗಿ: ವಿವೇಕ ನಗರ, ಗಿರಿನಗರ, ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಒಟ್ಟು ಐದು ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ಡೆಲಿವರಿ ಬಾಯ್ ಮತ್ತು ವಿದ್ಯಾರ್ಥಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ:ಲೈಂಗಿಕ ನಿರಾಸಕ್ತಿ ಹೊಂದಿದ್ದ ಪತಿಗೆ ಮಸಣದ ಹಾದಿ.. ಗಂಡನ ಕೊಂದ ಪತ್ನಿ, ಸುಪಾರಿ ಪ್ರಿಯಕರ ಅರೆಸ್ಟ್