ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಗಳ್ಳತನ ನಡೆಸಿರುವ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ. ಒಬ್ಬ ಕಳ್ಳ ವೃದ್ಧೆಯಿಂದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರೆ, ಇನ್ನಿಬ್ಬರು ಟೀಚರ್ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಠಾಣೆ ಹಿಂಭಾಗದಲ್ಲೇ ಕಳ್ಳ ಲಾಕ್: ಒಂದು ತಿಂಗಳ ಹಿಂದೆ ಸರಗಳ್ಳತನ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ಪೊಲೀಸ್ ಸ್ಟೇಷನ್ ಹಿಂಭಾಗದ ಏರಿಯಾದಲ್ಲೇ ಸಿಕ್ಕಿಬಿದ್ದಿರುವ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ ಬಂಧಿತ ಆರೋಪಿ. ಡಿಸೆಂಬರ್ 4 ರಂದು ಸಂಜೆ 6 ಗಂಟೆ ಸುಮಾರಿಗೆ ಪೂರ್ಣಪ್ರಜ್ಞಾ ಬಡಾವಣೆಯಲ್ಲಿ ರುಕ್ಮಿಣಿ ಎಂಬ ವೃದ್ಧೆಯ 44.7 ಗ್ರಾಂ. ತೂಕದ ಮಾಂಗಲ್ಯ ಸರವನ್ನು ಎಗರಿಸಿ ಆರೋಪಿ ಪರಾರಿಯಾಗಿದ್ದ.
ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ ಮಂಜುನಾಥ್, ಸಂಬಳ ಸಾಲದೇ ಮೊದಲ ಬಾರಿಗೆ ಸರಗಳ್ಳತನದ ಹಾದಿ ಹಿಡಿದಿದ್ದ. ಬಳಿಕ ಮನೆಗೆ ತೆರಳಿ ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳನ್ನು ಸುಟ್ಟು ಹಾಕಿದ್ದ. ಠಾಣೆಯ ಹಿಂಬದಿಯಲ್ಲೇ ಆತನ ಮನೆಯು ಇದ್ದಿದ್ದರಿಂದ ನಿತ್ಯ ಪೊಲೀಸರ ಚಲನವಲನಗಳನ್ನು ಗಮನಿಸಲು ಮಂಜುನಾಥ್ಗೆ ಅನುಕೂಲವಾಗಿತ್ತು. ಪ್ರತಿ ದಿನ ಪೊಲೀಸ್ ಠಾಣೆ ಮುಂಭಾಗದ ಟೀ ಅಂಗಡಿಯಲ್ಲಿ ನಿಂತು ಠಾಣೆಯ ಮುಂಭಾಗದ ಘಟನಾವಳಿಗಳನ್ನು ವೀಕ್ಷಿಸುತ್ತಿದ್ದ. ಮತ್ತೊಂದೆಡೆ ಕಳ್ಳತನದ ಬಳಿಕ ಆತನ ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದ.
ಇದನ್ನೂ ಓದಿ: ಅವಳು ಅವನಾಗಿ ಅವಳನ್ನು ಮದುವೆ ಆಗಿದ್ದ ವಿಚಿತ್ರ ಪ್ರಕರಣವಿದು.. ಆದ್ರೆ ಚಿಕ್ಕ ವಿಷಯಕ್ಕೆ ಕೋರ್ಟ್ ಮೆಟ್ಟಿಲೇರಿದ ಜೋಡಿಹಕ್ಕಿಗಳು!
ಆರೋಪಿಯ ಈ ಎಲ್ಲ ಚಲನವಲನಗಳನ್ನು ಸಿಸಿಟಿವಿಯಲ್ಲಿ ಗಮನಿಸಿದ ಪೊಲೀಸರಿಗೆ ಒಂದು ತಿಂಗಳ ಪ್ರಯತ್ನದ ಬಳಿಕ ಆತ ಪೊಲೀಸ್ ಠಾಣೆ ಹಿಂಭಾಗದ ಏರಿಯಾದಲ್ಲೇ ನೆಲೆಸಿರುವುದು ತಿಳಿದಿದೆ. ಈ ಸಂಬಂಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ಇನ್ಸ್‌ಪೆಕ್ಟರ್ ಉದಯರವಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, 2.20 ಲಕ್ಷ ಮೌಲ್ಯದ ಮಾಂಗಲ್ಯ ಸರ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟೀಚರ್ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿ: ಸ್ಕೂಟರಿನಲ್ಲಿ ಬಂದು ಹಾಡಹಗಲೇ ಸ್ಕೂಲ್ ಟೀಚರ್ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಹನುಮಂತನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುನೀಲ್ ಕುಮಾರ್ (37) ಹಾಗೂ ಶ್ರೀನಿವಾಸ್ (25) ಬಂಧಿತ ಆರೋಪಿಗಳು.
ಜನವರಿ 4 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹನುಮಂತನಗರ ಠಾಣಾ ವ್ಯಾಪ್ತಿಯ ಅಶೋಕನಗರದಲ್ಲಿ 56 ವರ್ಷದ ಸ್ಕೂಲ್ ಟೀಚರ್ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತು ಇವರಿಬ್ಬರು ಪರಾರಿಯಾಗಿದ್ದರು. 2016 ರವರೆಗೆ 8 ವರ್ಷ ದರೋಡೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಸುನೀಲ್ ಕುಮಾರ್, ನಂತರ ಬಿಡುಗಡೆಯಾಗಿ ಹೊರಬಂದು ಮದುವೆಯಾಗಿ ಕೆಲಕಾಲ ಸುಮ್ಮನಾಗಿದ್ದ. ಇತ್ತೀಚೆಗಷ್ಟೇ ಆರೋಪಿಗೆ ಪತ್ನಿಯೊಂದಿಗೆ ವಿಚ್ಛೇದನವಾಗಿತ್ತು.
ಮತ್ತೆ ಸರಗಳ್ಳತನಕ್ಕೆ ಇಳಿದಿದ್ದ ಸುನೀಲ್ ಶ್ರೀನಿವಾಸ್ ಜೊತೆಗೂಡಿ ಕೃತ್ಯ ಎಸಗಿ ಪರಾರಿಯಾಗಿದ್ದ. ಆರೋಪಿಗಳನ್ನು ಹಿಡಿಯಲು 15 ದಿನಗಳ ನಿರಂತರ ಕಾರ್ಯಾಚರಣೆ ಕೈಗೊಂಡ ಪಿಎಸ್ಐ ಸುನೀಲ್ ಕಡ್ಡಿ ನೇತೃತ್ವದ ತಂಡ ಕೊನೆಗೂ ಕಳ್ಳರನ್ನು ಬಂಧಿಸಿ ಒಂದೂವರೆ ಲಕ್ಷ ಮೌಲ್ಯದ 30 ಗ್ರಾಂ. ಚಿನ್ನದ ಸರ ಹಾಗೂ 12 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಕ್ರಿಮಿನಲ್ ಲಾಂಡಾ ಹರಿಕೆ ಸಹಚರರ ಬಂಧನ