ಬೆಂಗಳೂರು: ಅನಾರೋಗ್ಯ ಪೀಡಿತ ತಂದೆಯ ಚಿಕಿತ್ಸೆ ಹಣ ಹೊಂದಿಸಲು ಅಣ್ಣ ತಮ್ಮಂದಿರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಯನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಸಹೋದರರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಸುದೀಪ್ ಹಾಗೂ ರಜತ್ ಬಂಧಿತ ಅಣ್ಣ-ತಮ್ಮಂದಿರು.
ಇಬ್ಬರು ಸಹೋದರರು ಬಿಎಸ್ಸಿ ಹಾಗೂ ಬಿಕಾಂ ವ್ಯಾಸಂಗ ಮಾಡಿದ್ದರು. ಕಾಮಾಕ್ಷಿಪಾಳ್ಯ ನಿವಾಸಿಗಳಾಗಿದ್ದ ಆರೋಪಿಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಹೊಡೆತದಿಂದ ಇಬ್ಬರು ಕೆಲಸ ಕಳೆದುಕೊಂಡಿದ್ದರು. ಸಾಲಬಾಧೆಯಿಂದ ತತ್ತರಿಸುತ್ತಿದ್ದರು. ಅಲ್ಲದೆ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹಣ ಹೊಂದಿಸಲು ಪರಿದಾಡಿದ ಸಹೋದರರು ಹಣ ಸಂಪಾದನೆ ಮಾಡಲು ಕಳ್ಳತನದ ಮಾರ್ಗ ಹಿಡಿದಿದ್ದಾರೆ.
ಜು.6ರ ಬೆಳಗ್ಗೆ ವಿದ್ಯಾರಣ್ಯಪುರ ಠಾಣೆಯ ಎಂಪಿಎ ಲೇಔಟ್ನಲ್ಲಿ ಪಾರ್ಕ್ ಬಳಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಯನ್ನು ಹಿಂಬಾಲಿಸಿ ಸರ ಕಸಿದಿದ್ದಾರೆ. ಆರೋಪಿಗಳು ಸರ ಎಳೆದ ರಭಸಕ್ಕೆ ವೃದ್ಧೆ ನೆಲಕ್ಕೆ ಬಿದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.