ಬೆಂಗಳೂರು: ಕೊರೊನಾ ಆತಂಕದ ಮಧ್ಯೆಯೇ ವೃತ್ತಿಪರ ಕೋರ್ಸ್ಗಳ ಪ್ರವೇಶ ಪರೀಕ್ಷೆ (ಸಿಇಟಿ) ಇಂದಿನಿಂದ ಪ್ರಾರಂಭವಾಗಿದೆ. ಕೊರೊನಾ ಪಾಸಿಟಿವ್ ಹಾಗೂ ಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅನುಮತಿ ಸಿಕ್ಕಿದೆ.
ಆಗಸ್ಟ್ ಒಂದರವರೆಗೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ಉನ್ನತ ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಸಿದ್ಧತೆ ಮಾಡಿಕೊಂಡಿವೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂದಾಳತ್ವದಲ್ಲಿ ಆಯಾ ವಿಭಾಗದ ಡಿಸಿಪಿಗಳು ಹಾಗೂ ಠಾಣಾ ಇನ್ಸ್ಪೆಕ್ಟರ್ಗಳು, ಹೊಯ್ಸಳ ಪೊಲೀಸರು ಸಿಲಿಕಾನ್ ಸಿಟಿಯ ಪರೀಕ್ಷಾ ಕೇಂದ್ರಗಳ ಭದ್ರತೆ ನೋಡಿಕೊಳ್ಳಲಿದ್ದಾರೆ. ಪರೀಕ್ಷಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್, ಮಾಸ್ಕ್ ಬಳಸಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವಂತೆ ಸೂಚಿಸಲಾಗಿದೆ. ಕಂಟೈನ್ಮೆಂಟ್ ವಲಯಗಳಿಂದ ಬರುವವರ ಜವಾಬ್ದಾರಿಯನ್ನು ಪೊಲೀಸರು ಹೊತ್ತಿದ್ದು, ಪರೀಕ್ಷಾರ್ಥಿಗಳ ಕೈಯಲ್ಲಿರುವ ಹಾಲ್ ಟಿಕೆಟ್ಅನ್ನು ಪಾಸ್ ಎಂದು ಪರಿಗಣಿಸಿ ಒಳಗಡೆ ಬಿಡಲಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ ವಿನಾ ಕಾರಣ ಯಾರೂ ಓಡಾಡುವುಕ್ಕೆ ಅವಕಾಶವಿರುವುದಿಲ್ಲ.
ಬೆಳಿಗ್ಗೆ 10:30ರಿಂದ 11:50ರವರೆಗೆ ಹಾಗೂ ಮಧ್ಯಾಹ್ನ 12:30ರಿಂದ 3:30ರವರೆಗೆ ಪರೀಕ್ಷೆಗಳು ನಡೆಯಲಿದ್ದು, ರಾಜ್ಯದಲ್ಲಿ ಒಟ್ಟು 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ 497 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರು ಮಹಾನಗರದಲ್ಲಿ 83 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು, 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 30 ಮಂದಿ ವಿದೇಶಿಯರೂ ಇದ್ದಾರೆ. ಇಂದು ಜೀವಶಾಸ್ತ್ರ ಹಾಗೂ ಗಣಿತಶಾಸ್ತ್ರ ಪರೀಕ್ಷೆ ನಡೆಯಲಿದೆ.