ಬೆಂಗಳೂರು : ಇಂಜಿನಿಯರಿಂಗ್, ನರ್ಸಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಹೊರಬಿದ್ದಿದೆ. ಎಲ್ಲಾ ವಿಭಾಗಗಳಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರಿನ ವಿಜ್ಞೇಶ್ ನಟರಾಜ್ ಕುಮಾರ್ ಶೇ. 97.889% ರಷ್ಟು ಅಂಕ ಗಳಿಸಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಟಾಪ್ 10 ರ‍್ಯಾಂಕ್ ಪಟ್ಟಿಯಲ್ಲಿ ಮತ್ತೋರ್ವ ಬೆಂಗಳೂರಿನ ಅರುಣ್ ಕೃಷ್ಣಸ್ವಾಮಿ ಶೇ.97.5 ರಷ್ಟು ಅಂಕಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ನಗರದಲ್ಲಿಂದು ಮಲ್ಲೇಶ್ವರಂನಲ್ಲಿರುವ ಪರೀಕ್ಷಾ ಪ್ರಾಧಿಕಾರ ಕೇಂದ್ರ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್ ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯನ್ನು ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‌ಸಿ ನರ್ಸಿಂಗ್ ಸೇರಿದಂತೆ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ, ಕಳೆದ ಮೇ 20 ರಿಂದ ಮೇ 22ರ ವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಗೆ 2,44,345 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.
ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿದ ನಂತರ, ಇಂಜಿನಿಯರಿಂಗ್ ಕೋರ್ಸಿಗೆ 2,03,381 ರ‍್ಯಾಂಕ್ ನೀಡಲಾಗಿದೆ. ಕೃಷಿ ವಿಜ್ಞಾನ ಕೋರ್ಸುಗಳಿಗೆ 1,64,187 ಅಭ್ಯರ್ಥಿಗಳು, 1,66,756 ಮಹಾಸಂಗೋಪನೆ, 1,66,746 ಯೋಗ ಮತ್ತು ನ್ಯಾಚುರೋಪತಿ ಮತ್ತು 2,06,191 ಅಭ್ಯರ್ಥಿಗಳು ಬಿ ಫಾರ್ಮ ಕೋರ್ಸಿಗೆ ಮತ್ತು ಡಿ ಫಾರ್ಮ ಕೋರ್ಸಿಗೆ 2,06,340 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ ಎಂದು ವಿವರಿಸಿದರು.
ಪ್ರಸಕ್ತ ಸಾಲಿನಲ್ಲಿ ಐ.ಎನ್.ಸಿ ಅನುಸಾರ ಹಾಗು ಸರ್ಕಾರದ ಆದೇಶದ ಅನ್ವಯ ಬಿ.ಎಸ್.ಸಿ (ನರ್ಸಿಂಗ್) ಕೋರ್ಸಿಗೂ ಸಹ ಸಿಇಟಿ ನಡೆಸಲಾಗಿದ್ದು, ಒಟ್ಟು 1,66,808 ಅಭ್ಯರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಬಾಲಕಿಯರೇ ಮೇಲುಗೈ: ಬಿಎಸ್ಸಿ ಕೃಷಿ ವಿಜ್ಞಾನ ವಿಭಾಗದಲ್ಲಿ 71,796 ಬಾಲಕರು ಅರ್ಹತೆ ಪಡೆದರೆ, 94 ಸಾವಿರಕ್ಕೂ ಅಧಿಕ ಬಾಲಕಿಯರು ಅರ್ಹತೆ ಪಡೆದುಕೊಂಡಿದ್ದಾರೆ. ಬಿ ಫಾರ್ಮಾದಲ್ಲೂ 97 ಸಾವಿರ ಬಾಲಕರಿದ್ದರೆ, ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರು ಅರ್ಹರಾಗಿದ್ದಾರೆ. ಡಿ ಫಾರ್ಮಾದಲ್ಲೂ ಒಂದು ಲಕ್ಷ ಬಾಲಕಿಯರು, ಬಿಎಸ್ಸಿ ನರ್ಸಿಂಗ್ ನಲ್ಲೂ 94 ಸಾವಿರಕ್ಕೂ ಅಧಿಕ ಬಾಲಕಿಯರು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ವೈದ್ಯಕೀಯ ಕೋರ್ಸ್ ಗಳ ಫಲಿತಾಂಶ : ಯುಜಿ ನೀಟ್ ಫಲಿತಾಂಶ ಬಂದ ನಂತರ ಈ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್ ಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು. ನಾಟಾ-2023 ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕೆ ರ‍್ಯಾಂಕ್ ಅನ್ನು ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಶೀಘ್ರವಾಗಿ ಕೌನ್ಸಿಲಿಂಗ್ : ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2023ರ ಮೊದಲ ಸುತ್ತಿನ ಕೌನ್ಸಿಲಿಂಗ್ ದಿನಾಂಕಗಳನ್ನು ಶೀಘ್ರವಾಗಿ ಪ್ರಕಟಿಸಲಾಗುವುದು. ಇನ್ನೂ, ರ‍್ಯಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆ ನಂತರ ಅರ್ಹತೆ ಪರಿಗಣಿಸಲಾಗುವುದು ಎಂದು ಸುಧಾಕರ್ ಮಾಹಿತಿ ನೀಡಿದರು.
ಶುಲ್ಕ ಬದಲಾವಣೆಯಿಲ್ಲ: ಈ ಬಾರಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈಗಾಗಲೇ ಶುಲ್ಕ ನಿಗದಿಪಡಿಸಲಾಗಿದೆ. ಅದರಲ್ಲಿ ಬೇರೆ ಬೇರೆ ಆದಾಯ, ಸಮುದಾಯದವರಿಗೆ ಕೋರ್ಸ್ ವಾರು ಶುಲ್ಕ ನಿಗದಿ ಮಾಡಿದ್ದು, ಈ ಹಂತದಲ್ಲಿ ಕಡಿಮೆ ಮಾಡಲು ಆಗುವುದಿಲ್ಲ ಎಂದು ಸಚಿವ ಡಾ. ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದರು.
ಒಂದು ವಾರದಲ್ಲಿ ಕೌನ್ಸಿಲಿಂಗ್ ಪ್ರಾರಂಭ: ಒಂದು ವಾರದಲ್ಲಿ ಕೌನ್ಸಿಲಿಂಗ್ ಶುರುವಾಗಲಿದೆ. ಹಿಂದಿನ ಬಾರಿಯಂತೆ ಆನ್‌ಲೈನ್‌ನಲ್ಲಿಯೇ ಕೌನ್ಸಿಲಿಂಗ್ ಇರಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು. ಕೌನ್ಸಿಲಿಂಗ್‌ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.
ಟಾಪರ್ಸ್ ಗೆ ಸ್ಕಾಲರ್‌ಶಿಪ್ : ಈ ಬಾರಿ ಟಾಪ್ ರ‍್ಯಾಂಕಿಂಗ್ ಪಡೆದವರಿಗೆ ಸ್ಕಾಲರ್‌ಶಿಪ್ ನೀಡುವ ಸಂಬಂಧ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು. ಸರ್ಕಾರದಿಂದ ಅನುಮತಿ ದೊರೆತರೆ ಟಾಪರ್ಸ್‌ಗೆ ಸ್ಕಾಲರ್‌ಶಿಪ್ ಸಿಗಲಿದೆ ಎಂದರು. ಮಾಧ್ಯಮಗೋಷ್ಟಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಪ್ರಾಧಿಕಾರದ ಕಾರ್ಯನಿರ್ವಾಹಕಿ ಎಸ್.ರಮ್ಯಾ ಸೇರಿದಂತೆ ಪ್ರಮುಖರಿದ್ದರು.
ಫಲಿತಾಂಶ ಚೆಕ್ ಮಾಡುವ ವಿಧಾನ : ಕೆಇಎ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ಗೆ ಭೇಟಿ ನೀಡಿ. ಮುಖಪುಟದಲ್ಲಿ ಯುಜಿಸಿಇಟಿ -2023 ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇನ್ನೊಂದು ಪುಟ ಓಪನ್ ಆಗುತ್ತದೆ. ಓಪನ್ ಆದ ಪುಟದಲ್ಲಿ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಿ. ಅಗತ್ಯವಿರುವ ವಿವರಗಳನ್ನು ನಮೂದಿಸಿ ಸೈನ್ ಇನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಪರದೆಯ ಮೇಲೆ ನಿಮ್ಮ ಯುಜಿಸಿಇಟಿ-2023 ಫಲಿತಾಂಶ ಕಾಣಸಿಗುತ್ತದೆ.
ಇಂಜಿನಿಯರಿಂಗ್ ಟಾಪರ್ಸ್ : ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ತೃತೀಯ ಸ್ಥಾನವನ್ನು ಮೃದ್ಧ್ ಶೆಟ್ಟಿ ಹಾಗೂ ಎಸ್. ಸುಮೇಧ್ಗೆ 4ನೇ ಸ್ಥಾನ ಪಡೆದಿದ್ದಾರೆ. ಮಾಧವ ಸೂರ್ಯಗೆ 5ನೇ ಸ್ಥಾನ ಲಭಿಸಿದೆ.
ಹಲವು ವಿಭಾಗವಾರು ಮೊದಲ ರ‍್ಯಾಂಕ್...! :
ಭೈರೇಶ್ ಎಸ್.ಎಚ್ - ಬಿಎಸ್ಸಿ ಕೃಷಿ
ಮಾಳವಿಕಾ ಕಪೂರ್- ಬಿ.ವಿ. ಎಸ್ಸಿ ಪಶುಸಂಗೋಪನೆ ಹಾಗೂ ಬಿಎಸ್ಸಿ ನರ್ಸಿಂಗ್
ಪ್ರತೀಕ್ಷಾ ಆರ್ - ಬಿ.ಫಾರ್ಮಾ ಹಾಗೂ ಡಿ.ಫಾರ್ಮಾ
ಇದನ್ನೂ ಓದಿ : CET result: ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ, ಇಂಜಿನಿಯರಿಂಗ್ನಲ್ಲಿ ವಿಘ್ನೇಶ್ಗೆ ಮೊದಲ ರ‍್ಯಾಂಕ್