ಬೆಂಗಳೂರು: ನಗರದ ಅರಮನೆ ಮೈದಾನದ ತ್ರಿಪುರವಾಸನಿಯಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿರುವ ಸಿರಿಧಾನ್ಯ ಮತ್ತು ಸಾವಯವ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಮೇಳದಲ್ಲಿ ರೈತರು, ಖರೀದಿದಾರರು ಹಾಗೂ ಮಾರಾಟಗಾರರ ಸಮಾಗಮವಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳ ಸಿರಿಧಾನ್ಯ ಆಹಾರ ಪದಾರ್ಥಗಳು ಇಲ್ಲಿ ಮನಸೆಳೆದಿವೆ.
ವೈವಿಧ್ಯಮಯ ಸಿರಿಧಾನ್ಯ:ಸಾಮೆ, ನವಣೆ, ರಾಗಿ, ಹಾರಕ, ಊದಲು, ಕೊರಲೆ, ಬರಗು ಮತ್ತಿತರ ವೈವಿಧ್ಯಮಯ ಸಿರಿಧಾನ್ಯಗಳಿಂದ ತಯಾರಿಸಿದ್ದ ಸಿಹಿ ತಿಂಡಿಗಳು ಮಕ್ಕಳು ಹಾಗೂ ಯುವಕರನ್ನು ಆಕರ್ಷಿಸಿವೆ. ಇದರೊಂದಿಗೆ ಮಧುಮೇಹ, ಕಾಲು ನೋವು, ನಿಶಕ್ತಿ ಮತ್ತಿತರ ಸಮಸ್ಯೆಗಳು ಪರಿಹಾರವಾಗುವಂತಹ ಮಿಲೆಟ್ ಹೆಲ್ತ್ ಮಿಕ್ಸ್ ,ಪ್ರಿಮಿಯಮ್ ರಾಗಿ ಮಾಲ್ಟ ಸಹ ಮೇಳದಲ್ಲಿ ಮನಗೆದ್ದಿವೆ.
ಪೌಷ್ಟಿಕಾಂಶಗಳಾದ ಕಬ್ಬಿಣ, ಸತು, ಪೋಲಿಕ್ ಆಮ್ಲ, ಕ್ಯಾಲ್ಸಿಯಂ ಇತ್ಯಾದಿ ಕೊರತೆ ನೀಗಿಸುವ ಹಾಗೂ ಮಧುಮೇಹ, ಹೃದ್ರೋಗ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿರುತ್ತವೆ. ಮಕ್ಕಳಿಗೆ ಸಿರಿಧಾನ್ಯದಿಂದ ತಯಾರಿಸಿದ್ದ ಚಕ್ಕುಲಿ, ರಾಗಿ ಲಡ್ಡು, ರಾಗಿ, ನವಣಿ ಶ್ಯಾವಿಗೆ, ರಾಗಿ ಅಂಬಲಿ, ಸಜ್ಜೆ ಅಂಬಲಿ ಸೇರಿ ಇತರ ಸಿಹಿ ತಿನಿಸುಗಳನ್ನು ತಿಂದು ಸಂಭ್ರಮಿಸಿದರು.
300ಕ್ಕೂ ಹೆಚ್ಚು ಮಳಿಗೆಯಲ್ಲಿ ಪ್ರದರ್ಶನ: ಮೇಳದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ತರಹೇವಾರಿ ಸಿರಿಧಾನ್ಯಗಳು ಗ್ರಾಹಕರನ್ನು ಕೈಬಿಸಿ ಕರೆಯುತ್ತಿವೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಣಿಪುರ ಸೇರಿದಂತೆ ಹಲವು ರಾಜ್ಯಗಳಿಂದ ಸಿರಿಧಾನ್ಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಸಿರಿಧಾನ್ಯ ಮಹತ್ವ ತಿಳಿಯಲು ಮುಗಿಬಿದ್ದ ಜನತೆ: ಮಳಿಗೆ ಸಿಬ್ಬಂದಿ ಸಿರಿಧಾನ್ಯ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡುತ್ತಿರುವ ದೃಶ್ಯ ಮೇಳದಲ್ಲಿ ಕಂಡುಬಂತು. ಸಿರಿಧಾನ್ಯಗಳಿಂದ ರಾಶಿ ಪೂಜೆ ಅಲಂಕರಿಸಿದ್ದು, ನೋಡುಗರನ್ನು ಇದು ಸೆಳೆಯುತ್ತಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಮೇಳಕ್ಕೆ ಆಗಮಿಸಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಖರೀದಿಸುತ್ತಿರುವ ದೃಶ್ಯ ಕಂಡು ಬಂತು.
ಎತ್ತಿನ ಗಾಣ ಆಕರ್ಷಣೆ : ನೈಸರ್ಗಿಕ ಅಡುಗೆ ಎಣ್ಣೆ ತಯಾರಿಸುವ ಎತ್ತಿನ ಗಾಣ ಮೇಳದಲ್ಲಿ ಆಕರ್ಷಣೆ ಕೇಂದ್ರವಾಗಿದೆ. ಜನರು ಎತ್ತಿನ ಗಾಣ ನೋಡಿ ಅಲ್ಲಿಂದ ತಯಾರಿಸಿದ ಎಣ್ಣೆಯನ್ನು ಖರೀದಿಸಿದರು. ಇನ್ನು ಯುವಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಜನರು ಮಳಿಗೆ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖಷಿಪಡುತ್ತಿದ್ದಾರೆ.
ಸಿರಿಧಾನ್ಯ ಪೌಷ್ಟಿಕಾಂಶ ಅಪಾರ : ಸಿರಿಧಾನ್ಯಗಳು ಮಣ್ಣು ಮತ್ತು ನೀರನ್ನು ಕಡಿಮೆ ಬೇಡುವುದರಿಂದಾಗಿ ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. ಇವುಗಳಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ. ಗ್ಲುಟಿನಸ್ ಮತ್ತು ಆಮ್ಲಕಾರಕವಲ್ಲದ ಧಾನ್ಯಗಳಾಗಿವೆ. ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ಅಗತ್ಯವಾದ ಅಮೈನೋ ಆಸಿಡ್ಗಳು, ವಿಟಮಿನ್ಗಳು ಮತ್ತು ಮಿನರಲ್ಗಳು, ನೈಸರ್ಗಿಕವಾಗಿವೆ. ಇವು ಗ್ಲುಟೆನ್ಮುಕ್ತ, ಕ್ಷಾರೀಯ, ಅಲರ್ಜಿ ರಹಿತವಾಗಿದ್ದು ಸುಲಭವಾಗಿ ಜೀರ್ಣವಾಗುತ್ತವೆ.
ನವೋದ್ಯಮಿಗಳಿಗೆ ಪ್ರತ್ಯೇಕ ಪೆವಿಲಿಯನ್: ಕೃಷಿ ಇಲಾಖೆ ರಾಜ್ಯದ ಸಿರಿಧಾನ್ಯ ನವೋದ್ಯಮಿಗಳಿಗೆ ಪ್ರತ್ಯೇಕ ಪೆವಿಲಿಯನ್ ರಚಿಸಿದೆ. ಇಲ್ಲಿ ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲಾಗುತ್ತಿದೆ. ರಾಜ್ಯದ ಸಾವಯವ ಕೃಷಿ ನೀತಿ, ಸುಸ್ಥಿರ ಪದ್ಧತಿಗಳು, ತಾಂತ್ರಿಕತೆಗಳು, ಸಿರಿಧಾನ್ಯ ಉತ್ಪನ್ನಗಳ ವೈವಿಧ್ಯಮಯ ತಿನಿಸುಗಳನ್ನು ಪ್ರದರ್ಶಿಸಲಾಗಿದೆ.
ಮಳಿಗೆ ಹಂಚಿಕೆ: ಕರ್ನಾಟಕ ಪೆವಿಲಿಯನ್‌ನಲ್ಲಿ ಒಟ್ಟು 84 ಮಳಿಗೆಗಳಿವೆ. ಇದರಲ್ಲಿ ಸಿರಿಧಾನ್ಯ ನವೋದ್ಯಮಿಗಳಿಗೆ 30, ಪ್ರಾದೇಶಿಕ ಸಾವಯವ ಒಕ್ಕೂಟಕ್ಕೆ 15, ಕೃಷಿ ಸಂಬಂಧಿತ ಇಲಾಖೆಗೆ 5, ಕೃಷಿ ವಿವಿಗಳಿಗೆ 14 ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ 20 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.
ಕಾಲು ನೋವು ಮಧುಮೇಹಕ್ಕೆ ಮಿಲೆಟ್ ಹೆಲ್ತ್ ಮಿಕ್ಸ್ : ಮನೆಯಲ್ಲೇ ತಯಾರಿಸುವ ಮಿಲೆಟ್ ಹೆಲ್ತ್ ಮಿಕ್ಸ್ ಕಾಲು ನೋವು, ಮಧುಮೇಹ ಮತ್ತಿತರ ಸಮಸ್ಯೆಗಳಿಗೆ ಉಪಯುಕ್ತವಾಗಿದೆ .ಮೊದಲು ಮನೆಯಲ್ಲೇ ಸಣ್ಣದಾಗಿ ಆರಂಭಿಸಿದ ಧಾರವಾಡದ ಶಾರದ ಹೊಸಮನಿ ಅವರು ಈಗ ಕಂಪನಿ ತೆರೆಯುವಷ್ಟು ಬೆಳೆದಿದ್ದಾರೆ.
ಮಿಲೆಟ್ ಹೆಲ್ತ್ ಲಡ್ಡು, ಪ್ರಿಮಿಯಮ್ ರಾಗಿ ಮಾಲ್ಟ ತಯಾರಿಸುತ್ತಾರೆ. ಧಾರವಾಡದಲ್ಲಿ ಹೊಸಮನಿ ಗೃಹ ಉದ್ಯೋಗ ವೆಂದು ಕಂಪನಿ ಸಹ ಆರಂಭಿಸಿದ್ದಾರೆ. ಅವರ ಮಾತುಗಳಲ್ಲೇ ಕೇಳುವುದಾದರೆ, ನನಗೆ ಕಾಲು ನೋವು ಇತ್ತು. ಮೆಟ್ಟಿಲು ಹತ್ತಲೂ ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲೇ ತಯಾರಿಸಿ ಸೇವಿಸಿದಾಗ ನನಗೆ ನೋವು ಕಡಿಮೆಯಾಯಿತು.
9 ಸಿರಿಧಾನ್ಯಗಳು ಸೇರಿದಂತೆ ಮೂವತ್ತು ರೀತಿಯ ಧಾನ್ಯಗಳನ್ನು ಮೊಳಕೆ ಬರಿಸಿ ಮಾಡುತ್ತೇವೆ. ಮೂರು ವರ್ಷದಿಂದ ಮಾಡುತ್ತಿದ್ದು, ಒಂದೂವರೆ ವರ್ಷದಿಂದ ಮಾರುಕಟ್ಟೆಗೆ ತರಲಾಗಿದೆ. ಕಾಲು ನೋವು, ಸಕ್ಕರೆ ಕಾಯಿಲೆ ಇರುವವರಿಗೆ ಹೆಚ್ಚು ಅನುಕೂಲವಾಗಿದೆ. ಇದನ್ನು ಬಳಸಿದವರು ಮತ್ತೆ ಕರೆ ಮಾಡಿ ಉತ್ತಮವಾಗಿದೆ. ಇದನ್ನು ನಿಲ್ಲಿಸಬೇಡಿ ಎಂದು ಹೇಳಿದ್ರು. ಒಂದು ವರ್ಷದ ಮಗುವಿನಿಂದ ನೂರು ವರ್ಷದ ವ್ಯಕ್ತಿವರೆಗೂ ಇದನ್ನು ಉಪಯೋಗಿಸಬಹುದು. ಜೀರ್ಣ ಶಕ್ತಿ, ನಿಶಕ್ತಿ, ಕಾಲು ನೋವು, ಸೊಂಟನೋವು ಕಡಿಮೆಯಾಗುತ್ತದೆ ಎಂದು ಶಾರದಾ ಹೊಸಮನಿ ಅವರು ಈಟಿವಿ ಭಾರತ್ ಗೆ ಮಾಹಿತಿ ನೀಡಿದರು.
ಇದನ್ನೂಓದಿ:ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ ; ವಿಚಾರಣೆಗೆ ಹಾಜರಾದ ಬಿಎಂಆರ್ಸಿಎಲ್ ಎಂಡಿ ಅಂಜುಂ ಪರ್ವೇಜ್