ಬೆಂಗಳೂರು : ಪ್ರವಾಹ ಪೀಡಿತರು ಯಾವುದೇ ಕಾರಣಕ್ಕೆ ಭೀತಿಗೊಳಗಾಗಬಾರದು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಅವರ ಜೊತೆ ಇದೆ ಅಗತ್ಯ ನೆರವು ನೀಡಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಂತ್ರಸ್ಥರಿಗೆ ಭರವಸೆ ನೀಡಿದ್ದಾರೆ.
ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಜ್ಯ ಆಡಳಿತವು ಚುರುಕುಗತಿಯಲ್ಲಿ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತ್ಯಂತ ಮುತುವರ್ಜಿ ವಹಿಸಿ ಉತ್ತರ ಕರ್ನಾಟಕದಲ್ಲಿ ತಾವೇ ಮುಂದಾಗಿ ನಿಂತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಜನ ಪ್ರತಿನಿಧಿಗಳನ್ನು ಒಳಗೊಂಡ ನಿರ್ವಹಣಾ ತಂಡ ರಚಿಸಿದ್ದಾರೆ ಎಂದು ರಾಜ್ಯ ಸರ್ಕಾರದ ಪರಿಹಾರ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಂದು ಕೊಡಗು, ಉತ್ತರ ಕನ್ನಡ , ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಅಲ್ಲಿನ ಪರಿಸ್ಥಿತಿಯನ್ನು ಅವರು ವಿವರಿಸಿದ್ದಾರೆ. ಈ ತನಕ ಯಾವುದೇ ಜೀವ ಹಾನಿ ಆಗಿಲ್ಲವೆಂದು, ಅಗತ್ಯ ಇರುವವಡೆಗೆ ನಿರಾಶ್ರಿತರ ಕೇಂದ್ರ , ಪರಿಹಾರ ಕಾರ್ಯ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಸರ್ವ ಸನ್ನದ್ಧವಾಗಿ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಉತ್ತರ ಕನ್ನಡದಲ್ಲಿ 5 ಅಣೆಕಟ್ಟುಗಳ ಗೇಟ್ ತೆಗೆದು ನೀರನ್ನು ಬಿಟ್ಟಿರುವ ಕಾರಣ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ. ಅಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ 2,500 ಜನರಷ್ಟು ಇದ್ದು ಜಿಲ್ಲಾಡಳಿತ ಅಗತ್ಯ ಪರಿಹಾರ ಕ್ರಮ ತೆಗೆದುಕೊಂಡಿದ್ದನ್ನು ವಿವರಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನ ಪ್ರತಿನಿಧಿಗಳಾದ ರಘುಪತಿ ಭಟ್ , ಲಾಲ್ ಜಿ ಮೆಂಡನ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನಿರಂತರ ಸಂಪರ್ಕದಲ್ಲಿ ನಾನು ಇದ್ದೇನೆ. ಪ್ರವಾಹ ಪೀಡಿತರು ಯಾವುದೇ ಕಾರಣಕ್ಕೆ ಭೀತಿಗೊಳಗಾಗಬಾರದು. ಕೇಂದ್ರ ಸರಕಾರ , ರಾಜ್ಯ ಸರಕಾರ ಅವರ ಜೊತೆ ಇದೆ. ಇಂದು ಸಂಜೆ ನಾನು ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ. ಕೆಲ ಅತಿವೃಷ್ಟಿ ಪ್ರವಾಹ ಸ್ಥಳಗಳಿಗೆ ನಾಳೆ ಭೇಟಿ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ.