ಬೆಂಗಳೂರು: ಇಪ್ಪತ್ತೆರಡು ಜಿಲ್ಲೆಗಳಲ್ಲಿ ಪ್ರವಾಹ ಬಂದು ಹಾನಿಯಾಗಿದೆ. ಆದರೆ ಪ್ರವಾಹ ಬಂದಿಲ್ಲದ ಕಡೆ ಕುಮಾರಸ್ವಾಮಿ ಕಣ್ಣೀರು ಹಾಕಿ ಮುಳುಗಿಸ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯವಾಡಿದ್ರು. ಮಹಾಲಕ್ಷ್ಮಿ ಲೇಔಟ್ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಪ್ರಚಾರದ ವೇಳೆ ಮಾತನಾಡದ ಅವರು, ಕಣ್ಣೀರಿನ ನಾಟಕವನ್ನು ಇನ್ನೆಷ್ಟು ದಿನ ಆಡುತ್ತಾರೆ ಎಂದರು.
ನಾನು ಕೂಡ ಕೆ.ಆರ್.ಪೇಟೆಗೆ ಹೋಗಿದ್ದೆ. ಕುಮಾರಸ್ವಾಮಿ ಅಳೋದು ಇದೇ ಮೊದಲಲ್ಲ ಎಂದು ಅಲ್ಲಿಯ ಜನ ಹೇಳ್ತಿದ್ದರು ಎಂದರು. ಕಣ್ಣೀರು ಹಾಕುವುದು ಅವರ ಕುಟುಂಬದ ಬಳುವಳಿಯಾಗಿದೆ. ಕುಮಾರಸ್ವಾಮಿಯವರ ತಂದೆ ಮೊದಲು ಅಳುತ್ತಿದ್ದರು. ಈಗ ಅವರು ಅಳುತ್ತಿದ್ದಾರೆ. ಮುಂದೆ ಅವರ ಮಗ ನಿಖಿಲ್ ಕೂಡ ಅಳ್ತಾನೆ ಎಂದರು.
ಇನ್ನು ಬಿಎಸ್ವೈ ಸರ್ಕಾರದ ಅಸ್ತಿತ್ವದ ಬಗ್ಗೆ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಯಾವ ಸೀಮೆ ಜ್ಯೋತಿಷಿಯೋ ಗೊತ್ತಿಲ್ಲ. ಸಾಧಾರಣ ಈ ರೀತಿಯ ಜ್ಯೋತಿಷ್ಯವನ್ನು ಅವರು ಹೇಳ್ತಿರ್ತಾರೆ. ಅವರು ಮಾಡೋದು ಎರಡೇ ಕೆಲಸ. ಒಂದು ಜ್ಯೋತಿಷ್ಯ ಹೇಳೋದು. ಇನ್ನೊಂದು ಅಳೋದು ಎಂದರು. ಇನ್ನು ಚುನಾವಣಾ ಪ್ರಚಾರದ ವೇಳೆ ಸಚಿವ ಸುರೇಶ್ ಕುಮಾರ್ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.