ಬೆಂಗಳೂರು : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷದಲ್ಲಿ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡಲಾಗಿತ್ತು. ರಾಜ್ಯ ಸೇವೆ ಸಾಕು, ಕೇಂದ್ರಕ್ಕೆ ಬನ್ನಿ ಎಂದು ಹೇಳಿದರು. ಆದರೆ ಇವರು ಒಂದು ವಿಧಾನಸಭೆ ಕ್ಷೇತ್ರಕ್ಕೆ ಸೀಮಿತನಾಗಿರುತ್ತೇನೆ ಎಂದರು. ಇದು ಅವರ ಸಣ್ಣತನ ತೋರಿಸುತ್ತದೆ. ನೀವು ಇಲ್ಲಿಯವರೆಗೂ ಬೆಳೆದು ಬರಲು ನಿಮ್ಮ ಸಾಮರ್ಥ್ಯ ಕಾರಣವಲ್ಲ. ಲಕ್ಷಾಂತರ ಕಾರ್ಯಕರ್ತರ ಬೆವರು, ಶ್ರಮ ಕಾರಣ. ನಿಮ್ಮ ಸ್ವಾರ್ಥಕ್ಕೆ ಕಾರ್ಯಕರ್ತರ ಬಳಸಿಕೊಂಡಿದ್ದೀರಿ. ಅವರ ಶಾಪ ನಿಮಗೆ ತಟ್ಟದೇ ಇರಲ್ಲ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಕೇಂದ್ರ ಸಚಿವ ಭಗವಂತ ಖೂಬಾ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಕಳೆದ ನಾಲ್ಕು ದಶಕಗಳಿಂದ ಪಕ್ಷದ ಕಾರ್ಯಕರ್ತರಾಗಿದ್ದರು. ಅವರಿಗೆ ಪಕ್ಷದಲ್ಲಿ, ರಾಜ್ಯದಲ್ಲಿ ಎಲ್ಲ ಉನ್ನತ ಸ್ಥಾನ ಕೊಟ್ಟಿದ್ದೆವು. ಸರ್ಕಾರದಲ್ಲಿಯೂ ಉನ್ನತ ಸ್ಥಾನ ಕೊಟ್ಟಿದ್ದೆವು. ಆದರೆ ನಮಗೆ ದ್ರೋಹ ಮಾಡಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಸ್ವಾರ್ಥದ ರಾಜಕಾರಣಕ್ಕೆ ಸಾಕ್ಷಿಯಾಗಿದ್ದಾರೆ. ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಯಲು ಬಿಜೆಪಿ ತತ್ವ ಸಿದ್ಧಾಂತವನ್ನು ನಂಬಿ ಕೋಟಿಗಟ್ಟಲೆ ಕಾರ್ಯಕರ್ತರು ತಮ್ಮ ಜೀವನದ ಹಂಗು ತೊರೆದು, ಕುಟುಂಬವನ್ನು ತೊರೆದು ಪಕ್ಷವನ್ನು ಕಟ್ಟಿದ್ದಾರೆ. ನಮ್ಮ ಕಾರ್ಯಕರ್ತನಿಗೆ ದೇಶ ಮೊದಲು ನಂತರ ಪಕ್ಷ. ಕಡೆಯದಾಗಿ ನಾನು ಎನ್ನುವುದಾಗಿದೆ ಎಂದು ಹೇಳಿದರು.
ಕಳೆದ ನಾಲ್ಕು ದಶಕದಿಂದ ಶೆಟ್ಟರ್ ಕೂಡ ದೇಶ ಮೊದಲ ಎನ್ನುವ ತತ್ವವನ್ನು ಒಪ್ಪಿ ಸಂಪೂರ್ಣವಾದ ಅಧಿಕಾರ ಅನುಭವಿಸಿದ್ದಾರೆ. ಆದರೆ ಇಂದು ಪಕ್ಷದ ವರಿಷ್ಠರು ಯುವ ಪೀಳಿಗೆಗೆ ಅವಕಾಶ ಮಾಡಿಕೊಡುವ ಸದುದ್ದೇಶದಿಂದ ನಿಮ್ಮ 30 ವರ್ಷದ ಕ್ಷೇತ್ರ ಸೇವೆ ಅಲ್ಲಿ ಸಾಕು. ಮಂತ್ರಿ, ಮುಖ್ಯಮಂತ್ರಿಯಾಗಿ ಸೇವೆ ಮಾಡಿದ್ದು, ಈಗ ದೇಶದ ಸೇವೆಗೆ ಬನ್ನಿ ಎಂದು ಸ್ಪಷ್ಟ ಆಹ್ವಾನ ನೀಡಿದ್ದಾರೆ. ಆದರೆ ಆ ಆಹ್ವಾನ ತಿರಸ್ಕರಿಸಿ ಕೇವಲ ಒಂದು ವಿಧಾನಸಭಾ ಕ್ಷೇತ್ರದ ಜನತೆಯ ಸೇವೆಗೆ ಟಿಕೆಟ್ ಕೇಳುತ್ತೇನೆ ಎಂದು ಸಣ್ಣತನ ತೋರಿದ್ದಾರೆ ಎಂದು ಟೀಕಿಸಿದರು.
ಪಕ್ಷದಲ್ಲಿ ಅನೇಕ ಜವಾಬ್ದಾರಿ ಹೊತ್ತು ಬೆಳೆದ ನಂತರ ನೀವು ಲಕ್ಷಾಂತರ ಕಾರ್ಯಕರ್ತರ ನಂಬಿಕೆ ಹುಸಿಗೊಳಿಸಿ ಕಾರ್ಯಕರ್ತರನ್ನು ನಿಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದೀರಿ. ನಿಮ್ಮ ಸಾಮರ್ಥ್ಯದಿಂದ ಈ ಎತ್ತರಕ್ಕೆ ನೀವು ಬೆಳೆದಿಲ್ಲ. ಲಕ್ಷಾಂತರ ಕಾರ್ಯಕರ್ತರ ಬೆವರು, ಸೇವೆಯ ಫಲದಿಂದ ನೀವು ಈ ಹಂತ ತಲುಪಿದ್ದೀರಿ. ಅವರಿಂದಾಗಿ ನೀವು ಮಂತ್ರಿ ,ಮುಖ್ಯಮಂತ್ರಿ ಆಗಿದ್ದಿರಿ. ಇದರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಶ್ರಮ ಇದೆ. ಈ ದ್ರೋಹಕ್ಕೆ ಕಾರ್ಯಕರ್ತರು, ಜನತೆ ಎಂದೂ ಕ್ಷಮಿಸಲ್ಲ ಎಂದು ನೊಂದ ಕಾರ್ಯಕರ್ತನಾಗಿ ನಾನು ಹೇಳುತ್ತಿದ್ದೇನೆ ಎಂದರು.
ಸವದಿ ಮತ್ತು ಶೆಟ್ಟರ್ ಇಬ್ಬರ ರಾಜೀನಾಮೆ ನಂತರ ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆ ಎನ್ನುವ ಸುದ್ದಿ ಬರುತ್ತಿದೆ. ಇದು ಸತ್ಯಕ್ಕೆ ದೂರವಾದ ವಿಚಾರ. ಈ ಬಾರಿ ಎಲ್ಲ ರಾಜಕೀಯ ಪಕ್ಷಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಹೊಸ ಮುಖಗಳನ್ನು ಮತ್ತು ಲಿಂಗಾಯತ ಸಮುದಾಯದ ಅಭ್ಯರ್ಥಿಗಳನ್ನು ಬಿಜೆಪಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಮಾಡಿದೆ. ಕಾಂಗ್ರೆಸ್ ಯಾವ ರೀತಿ ವೀರೇಂದ್ರ ಪಾಟೀಲರನ್ನು ನಡೆಸಿಕೊಂಡಿತ್ತು ಎನ್ನುವುದನ್ನು ಶೆಟ್ಟರ್, ಸವದಿ ಮರೆತಿರುವಂತಿದೆ. ಆದರೆ ಶೆಟ್ಟರ್, ಸವದಿ ಅವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಸಾಮರ್ಥ್ಯ ಏನು ಎನ್ನುವುದನ್ನು ಚುನಾವಣೆಯಲ್ಲಿ ತೋರಿಸಲಾಗುತ್ತದೆ. ಹೆಚ್ಚಿನ ಪ್ರಮಾಣದ ಮತದಾನ ಮಾಡಿಸಿ ಮೇ 13 ರಂದು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ವಿಜಯಶಾಲಿಗಳಾಗಿ ಬರಲಿದ್ದಾರೆ. ಈ ಇಬ್ಬರನ್ನು ಹೀನಾಯವಾಗಿ ಸೋಲಿಸಲಿದ್ದಾರೆ ಎಂದರು.
ಲಿಂಗಾಯತ ಸಮುದಾಯದ ಕಡೆಗಣನೆ ಆರೋಪ ಸತ್ಯಕ್ಕೆ ದೂರವಾದ್ದಾಗಿದೆ. ಪ್ರಬುದ್ದತೆ ಹೊಂದಿದ ಸಮಾಜ ಲಿಂಗಾಯತ ಸಮುದಾಯ, ಸ್ವಾರ್ಥಕ್ಕೆ ಯಾರಾದರೂ ಸಮಾಜ ಬಳಕೆಗೆ ಯತ್ನಿಸಿದರೆ ಅದನ್ನು ಒಪ್ಪಲ್ಲ. ಇಡೀ ಸಮಾಜ ಮೋದಿ ಆಡಳಿತ, ಬಿಜೆಪಿ ತತ್ವ ಸಿದ್ದಾಂತಗಳಿಗೆ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಪರ ಗಟ್ಟಿಯಾಗಿ ನಿಂತಿದೆ. ಇದರ ಜೊತೆ ಇನ್ನಿತರ ಸಮುದಾಯದ ಸಹಕಾರ ಪಡೆದು ಮತ್ತೊಮ್ಮೆ ಬಿಜೆಪಿ ರಾಜ್ಯದಲ್ಲಿ ಮ್ತೆ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ. ಶೆಟ್ಟರ್ ರಾಜೀನಾಮೆ ಕಾರ್ಯಕರ್ತರಿಗೆ ಆಘಾತ ತಂದಿದೆ. ಅವರೆಲ್ಲಾ ಮನನೊಂದಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಶಾಪ ನಿಮಗೆ ತಟ್ಟಲಿದೆ ಎಂದರು.
ಗೌರವಯುತವಾಗಿ ಪಕ್ಷ ನಡೆಸಿಕೊಳ್ಳಲಿಲ್ಲ ಎಂದಿದ್ದೀರಿ, ವರಿಷ್ಠರು ಫೋನ್ ಮೂಲಕ ಚರ್ಚೆ ಮಾಡಿ ನಿರ್ಣಯ ತಿಳಿಸುವುದು ಗೌರವಯುತವಾಗಿ ನಡೆದುಕೊಂಡ ಬಗೆಯಲ್ಲವೇ ಎಂದು ಖೂಬಾ ಪ್ರಶ್ನಿಸಿದರು. ಈಶ್ವರಪ್ಪ ಕೂಡ ಎರಡು ಬಾರಿ ಪಕ್ಷದ ಅಧ್ಯಕ್ಷರಾಗಿದ್ದರು. ಡಿಸಿಎಂ ಆಗಿದ್ದರು. ಅವರು ವರಿಷ್ಠರ ನಿರ್ಣಯ ಒಪ್ಪಿ ಸಕ್ರಿಯ ರಾಜಕಾರಣದಲ್ಲಿರಲ್ಲ, ಟಿಕೆಟ್ ಗೆ ಪರಿಗಣಿಸಬೇಡಿ ಎಂದರು. ಅವರ ಹಾದಿಯನ್ನು ತುಳಿಯಬಹುದಿತ್ತಲ್ಲ? ಎಂದು ಪ್ರಶ್ನಿಸಿದರು.
ಬಿಜೆಪಿ ಮುಖ್ಯ ವಕ್ತಾರ ಎಂಜಿ ಮಹೇಶ್ ಮಾತನಾಡಿ, ಹಿಂದೆ ಜಗದೀಶ್ ಶೆಟ್ಟರ್ ಗೆ ಅವಕಾಶ ನೀಡಬೇಕಾದಾಗಲೂ ಇಂತಹದ್ದೇ ಸ್ಥಿತಿ ಎದುರಾಗಿತ್ತು. ಶೆಟ್ಟರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂದುಕೊಂಡಿದ್ದಾಗ ಹಿರಿಯರಾದ ಬಿಬಿ ಶಿವಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆಗ ಹಿರಿಯರಾದ ಶಿವಪ್ಪ ಬದಲು ಶೆಟ್ಟರ್ ಗೆ ಅವಕಾಶ ಮಾಡಿಕೊಡಲಾಯಿತು. ಹಿಂದೆ ಯಾವ ಪ್ರಯೋಗದಿಂದ ರಾಜ್ಯಾಧ್ಯಕ್ಷ, ಮಂತ್ರಿ, ಮುಖ್ಯಮಂತ್ರಿಯಾದರೋ ಅದೇ ಪ್ರಯೋಗವನ್ನು ಈಗ ಮಾಡಲು ಮುಂದಾದಾಗ ಶೆಟ್ಟರ್ ವಿರೋಧಿಸಿದ್ದಾರೆ. ಹಿಂದೆ ಈ ರೀತಿಯಾಗಿದ್ದರೆ ಶೆಟ್ಟರ್ ಗೆ ಅವಕಾಶವೇ ಸಿಗುತ್ತಿರಲಿಲ್ಲ. ಈಗ ಶೆಟ್ಟರ್ ಹೊರ ಹೋಗಿದ್ದಾರೆ. ಇಂತಹ ನೂರು ಜಗದೀಶ್ ಶೆಟ್ಟರ್ ತಯಾರು ಮಾಡುವ ಸಾಮರ್ಥ್ಯ ನಮ್ಮ ಪಕ್ಷಕ್ಕಿದೆ. ನಾವು ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಶೆಟ್ಟರ್ ಬಿಜೆಪಿ ತೊರೆದಿರುವುದು ನಮಗೆ ಬಹಳ ನೋವಾಗಿದೆ.. ಅರವಿಂದ್ ಬೆಲ್ಲದ್ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ತೊರೆದಿರುವುದು ನಮಗೆ ಬಹಳ ನೋವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಧಾರವಾಡದ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ಮುಂದಾಳತ್ವದಲ್ಲಿ ರಾಷ್ಟ್ರೀಯತೆಯಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ರೀತಿ ದೇಶ ಮುಂದೆ ಸಾಗುತ್ತಿದೆ. ಸಾಮಾನ್ಯ ಕಾರ್ಯಕರ್ತನಾಗಿ ಜೀವನ ಆರಂಭ ಮಾಡಿ, ಕೋರ್ಟ್ ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಅವರನ್ನು ಶಾಸಕರನ್ನಾಗಿ ಮಾಡಲಾಯಿತು. ಶಾಸಕ ನಂತರ ಮಂತ್ರಿ ಹಾಗೂ ಸಿಎಂ ಸೇರಿದಂತೆ ವಿವಿಧ ಹುದ್ದೆಗಳನ್ನು ಬಿಜೆಪಿ ಪಕ್ಷ ನೀಡಿದೆ. ಎಲ್ಲ ಸ್ಥಾನ ಮಾನಗಳನ್ನು ತೆಗೆದುಕೊಂಡು ಈಗ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇದು ನಮ್ಮೆಲ್ಲ ಕಾರ್ಯಕರ್ತರಿಗೆ ಬಹಳ ನೋವು ತಂದಿದೆ ಎಂದರು.
ಇನ್ನು, ಅವರು ಕಾರ್ಯಕರ್ತರ ಜೊತೆ ಪಕ್ಷ ಕಟ್ಟುತ್ತಾರೆ ಅಂದುಕೊಂಡಿದ್ದೆವು. ಪಕ್ಷಕ್ಕೆ ದುಃಖ ಆಗಿದೆ, ಆದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲ. ಪಕ್ಷ ಇಂದು ಬಹಳ ಬೆಳೆದಿದೆ. ಅದರಿಂದ ಡ್ಯಾಮೇಜ್ ಆಗಲ್ಲ. ಹಿರಿಯರೊಬ್ಬರು ಮನೆ ತೊರೆದದ್ದಕ್ಕಾಗಿ ದುಃಖ ಆಗಿದೆ. ಕೇಂದ್ರದಲ್ಲಿ ರಾಜ್ಯ ಸಭಾ ಸದಸ್ಯರನ್ನಾಗಿ ಮಾಡುತ್ತೇವೆ ಎಂದರೂ ಅವರು ಕೇಳಿಲ್ಲ. ಲಿಂಗಾಯತರನ್ನು ಸಿಎಂ ಮಾಡಿದ್ದು ಹಾಗೂ ಮುಂದೆ ಮಾಡುವ ಪಕ್ಷ ಇದ್ದರೆ ಅದು ಬಿಜೆಪಿ. ನಮ್ಮ ಪಟ್ಟಿಯಲ್ಲಿ 67 ಸೀಟ್ ಗಳನ್ನು ಲಿಂಗಾಯತರಿಗೆ ಕೊಟ್ಟಿದೆ ತಿಳಿಸಿದರು.
ಇದನ್ನೂ ಓದಿ : ಬಿಜೆಪಿ ಮುಳುಗಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ: ಲಕ್ಷ್ಮಣ್ ಸವದಿ