ಬೆಂಗಳೂರು : ಮಧ್ಯಪ್ರದೇಶ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಡಿ.14ರಂದು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿತ್ತು. ಇದೀಗ ಶಿಫಾರಸು ನಿರ್ಣಯಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದು, ಅವರ ಆದೇಶಾನುಸಾರ ಕೇಂದ್ರ ಕಾನೂನು ಸಚಿವಾಲಯ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನ್ಯಾ. ಸತೀಶ್ ಚಂದ್ರ ಶರ್ಮಾ ಅವರು ಮಧ್ಯಪ್ರದೇಶ ಹೈಕೋರ್ಟ್ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯದಲ್ಲೇ ರಾಜ್ಯ ಹೈಕೋರ್ಟ್‌ಗೆ ಆಗಮಿಸಲಿದ್ದಾರೆ.
ಮೂಲತಃ ಭೋಪಾಲಿನವರಾಗಿರುವ ಇವರು ಡಾ. ಹರಿಸಿಂಗ್ ಗೌರ್ ಯೂನಿರ್ವಸಿಟಿಯಲ್ಲಿ ಕಾನೂನು ಪದವಿ ಪಡೆದು, 1984 ರಿಂದ ವಕೀಲಿಕೆ ಆರಂಭಿಸಿದ್ದರು. ಸಂವಿಧಾನ, ಸೇವಾ ನಿಯಮಗಳು, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಪರಿಣಿತರಾಗಿರುವ ನ್ಯಾ. ಶರ್ಮಾ ಅವರು 2008ರ ಜನವರಿ 18 ರಂದು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.