ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಇಲ್ಲವೆಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ಮತ್ತೊಂದಡೆ ಲಸಿಕೆಗಳ ಕೊರತೆ ಉಂಟಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸುತ್ತಿದೆ. ಸಮರ್ಪಕವಾಗಿ ಕಾರ್ಯನಿರ್ವಹಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ವ್ಯಾಕ್ಸಿನ್ ಕೊರತೆಗೆ ಹೊಣೆ ಎಂದು ಕಾಂಗ್ರೆಸ್ ದೂರಿದೆ.
ಈ ಬಗ್ಗೆ ಟ್ವೀಟ್ ಮಾಡಿ ತನ್ನ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್, ಲಸಿಕೆ ಹಿನ್ನೆಡೆಗೆ ರಾಜ್ಯಗಳೇ ಹೊಣೆ ಎಂದು ಕೇಂದ್ರ ಆರೋಪಿಸಿದೆ. ಇದನ್ನು ರಾಜ್ಯ ಬಿಜೆಪಿ ಸರ್ಕಾರ ಒಪ್ಪುವುದೇ? 7,8 ತಿಂಗಳು ಕಳೆದರೂ ಲಸಿಕೆ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳದ ಕೇಂದ್ರದ ಈ ಆರೋಪವು ಎಲ್‌ಕೆಜಿ ಮಕ್ಕಳು ಸಬೂಬು ಹೇಳಿದಂತೆ! ಒಟ್ಟಿನಲ್ಲಿ ಡಬಲ್ ಇಂಜಿನ್‌ಗಳೆರೆಡೂ ಕೆಟ್ಟು ನಿಂತಿವೆ! ಎಂದು ಲೇವಡಿ ಮಾಡಿದೆ.
ಆರಂಭದ ಲಸಿಕಾಕರಣಕ್ಕೆ ಹಿನ್ನೆಡೆಯಾಗುವುದು ಸಹಜ, ಆದರೆ ಲಸಿಕಾಕರಣ ಆರಂಭವಾಗಿ 7,8 ತಿಂಗಳು ಕಳೆದರೂ ಪರಿಸ್ಥಿತಿ ಸುಧಾರಿಸದೆ ತೀವ್ರ ಕೊರತೆಯಾಗುತ್ತಿದೆ ಎಂದರೆ ಅದು ಸರ್ಕಾರದ ವೈಫಲ್ಯ ಹಾಗೂ ಲಸಿಕೆಗಳ ಖಾಸಗಿ ವ್ಯಾಪಾರಕ್ಕೆ ಸಹಕರಿಸಲು ಸರ್ಕಾರದ ಹುನ್ನಾರವೆಂಬುದು ಸ್ಪಷ್ಟ. ಎಷ್ಟಾದರೂ ಇದು ವ್ಯಾಪಾರಿಗಳ ಸರ್ಕಾರವಲ್ಲವೇ!? ಎಂದು ಪ್ರಶ್ನಿಸಿದೆ.
ಲಸಿಕೆ ಕೊಡಲು ಮರೆತರೆ?: ಡಬಲ್ ಇಂಜಿನ್ ಸರ್ಕಾರಗಳು, 25 ವೀರಾಧಿವೀರ ಸಂಸದರು!, 6 ಶೂರಾಧಿಶೂರ ಕೇಂದ್ರ ಸಚಿವರು! ಇಷ್ಟಿದ್ದೂ ಲಸಿಕೆ ಹಂಚಿಕೆಯಲ್ಲಿ ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಮುಂದುವರಿದಿದ್ದು ಏಕೆ? ಜಾಹೀರಾತಿನ ಬ್ಯಾನರ್‌ಗಳನ್ನ ಕೊಟ್ಟು ಕಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಲಸಿಕೆ ಕೊಡಲು ಮರೆತರೆ ರಾಜ್ಯ ಬಿಜೆಪಿ ನಾಯಕರೇ!? ಎಂದು ಕೇಳಿದೆ.
ಜನ ಸಾಯಬೇಕೆ?
ರಾಜ್ಯದಲ್ಲಿ ಮಳೆ ಅಬ್ಬರ ಹೆಚ್ಚಾಗಿರುವುದರ ಬಗ್ಗೆ ಪ್ರಸ್ತಾಪಿಸಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಹಾಗೂ ಕೊಡಗಿನಲ್ಲಿ ಭೂಕುಸಿತದ ಭೀತಿ ಎದುರಾಗಿದೆ. 'ಎಮ್ಮೆಯ ಮೇಲೆ ಮಳೆ ಹೊಯ್ದಂತೆ' ಎಂದು ಹಿಂದಿನ ಘಟನೆಗಳಿಂದ ಪಾಠ ಕಲಿಯದೆ ಅಗತ್ಯ ಸಿದ್ಧತೆಯಿಲ್ಲದೆ ಸರ್ಕಾರ ನಿದ್ರಿಸುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೇ ತಾವು ಪ್ರವಾಹ ಎದುರಿಸಲು ತಯಾರಾಗಲು ದುರಂತವೇ ಸಂಭವಿಸಬೇಕೆ? ಜನ ಸಾಯಬೇಕೆ? ಎಂದು ಪ್ರಶ್ನಿಸಿದೆ.
ಓದಿ: ಡಿಸೆಂಬರ್‌ವರೆಗೆ ಜಿ.ಪಂ, ತಾ.ಪಂ ಚುನಾವಣೆ ನಡೆಸದಿರಲು ಸರ್ಕಾರ ತೀರ್ಮಾನ