ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ವಿವಾದದ ಮೇಲೆ ವಿವಾದ ಎದ್ದು ಕಾಣುತ್ತಿದೆ. ಇದೀಗ ವೀರ ಸಾವರ್ಕರ್ ಗಣೇಶೋತ್ಸವ ವಿರೋಧಿಸಿ ಚಾಮರಾಜೇಂದ್ರ ಒಡೆಯರ್ ಹಾಗೂ ಅಪ್ಪು ಗಣೇಶೋತ್ಸವ ಆಚರಿಸಲು ಸಂಘಟನೆ ಮುಂದಾಗಿದೆ.
ಶಂಕರ್ ನಾಗ್ ಕನ್ನಡ ಜ್ಯೋತಿ ಗೆಳೆಯರ ಬಳಗ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 500 ಕಡೆ ಚಾಮರಾಜೇಂದ್ರ ಒಡೆಯರ್, ಅಪ್ಪು ಹಾಗೂ ಶಂಕರ್ ನಾಗ್ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಂಕರ್ ನಾಗ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಗಜೇಂದ್ರ, ಸಾವರ್ಕರ್ಗೂ ಕರ್ನಾಟಕಕ್ಕೂ ಏನು ಸಂಬಂಧ. ಅಂತಹ ವ್ಯಕ್ತಿಯ ಹೆಸರಿನಲ್ಲಿ ಸಾರ್ವಜನಿಕ ಹಣದಿಂದ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಂಚು: ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಭಾರಿ ಸಂಚು ಇದೆ. ಹಾಗಾಗಿ, ಈ ರೀತಿಯ ವಿವಾದಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದನ್ನು ಹತ್ತಿಕ್ಕಬೇಕಾದ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಅಭಿಮಾನಿಗಳಿಂದ ಆಚರಣೆ: ರಾಜ್ಯ ಸರ್ಕಾರ ಚಾಮರಾಜೇಂದ್ರ ಒಡೆಯರ್, ಅಪ್ಪು ಹಾಗೂ ಶಂಕರ್ ನಾಗ್ ಅವರ ಭಾವಚಿತ್ರ ಇಟ್ಟು ಗಣೇಶೋತ್ಸವ ಆಚರಣೆಗೆ ಮುಂದಾಗಬೇಕು. ಇಲ್ಲದಿದ್ದರೆ, ನಾವೇ ಸ್ವತಃ ಅಭಿಮಾನಿಗಳೇ ಆಚರಣೆ ಮಾಡುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಲಾಲ್ ಮುಕ್ತ ಗಣೇಶ ಹಬ್ಬ ಮಾಡಬೇಕು: ಸಾವರ್ಕರ್ ಭಾವಚಿತ್ರ ಹಂಚಿದ ಮುತಾಲಿಕ್