ಇತ್ತೀಚೆಗಷ್ಟೇ ಸಿಡಿಎಸ್ (ಚೀಪ್ ಆಫ್ ಡಿಫೆನ್ಸ್ ಸ್ಟಾಫ್) ಅಂದರೆ ಮೂರೂ ಸೇನೆಗಳಿಗೆ ಮುಖ್ಯಸ್ಥರ ಹುದ್ದೆ ಸೃಷ್ಟಿಯ ಘೋಷಣೆ ಮಾಡಲಾಗಿದ್ದು, ಈ ಹುದ್ದೆಯ ಉದ್ದೇಶ ಮತ್ತು ಆಡಳಿತದ ಪ್ರಮುಖ ವಲಯದಲ್ಲಿ ಈ ಹುದ್ದೆ ಪಡೆದುಕೊಳ್ಳಲಿರುವ ಸ್ಥಾನಮಾನದ ಬಗ್ಗೆ ಸೂಕ್ಷ್ಮ ಎಚ್ಚರಿಕೆಯಿಂದಲೇ ನಾವು ಸ್ವಾಗತವನ್ನೂ ಮಾಡಬೇಕಿದೆ. ಈ ಹುದ್ದೆಯನ್ನು ಸರ್ಕಾರ ಡಿಸೆಂಬರ್ 24ರಂದು ಘೋಷಣೆ ಮಾಡಿದೆ.

ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದಲೂ ಮಾತುಕತೆ ಚರ್ಚೆ ನಡೆಯುತ್ತಿದ್ದರೂ, ಕೊನೆಗೂ ಕ್ರಮ ಕೈಗೊಂಡಿದ್ದಕ್ಕೆ ಮೋದಿ ಸರ್ಕಾರವನ್ನು ನಾವು ಮೆಚ್ಚಬೇಕಿದೆ. ಸಿಡಿಎಸ್ ಹುದ್ದೆ ಸೃಷ್ಟಿಯ ಕಲ್ಪನೆ 2001ರಲ್ಲೇ ಹುಟ್ಟಿಕೊಂಡಿತ್ತು ಎಂಬುದನ್ನು ನಾವು ಈ ಸಂದರ್ಭದಲ್ಲೆ ಹಳೆಯ ನೆನಪುಗಳನ್ನು ಕೆದಕಬಹುದು. ಈ ಹುದ್ದೆಗೆ ಯಾವ ರೀತಿಯಲ್ಲಿ ಅಧಿಕಾರ ನೀಡಲಾಗುತ್ತದೆ ಎಂಬುದೇ ಸದ್ಯ ಇರುವ ನಿಜವಾದ ಸವಾಲು. ಅಷ್ಟೇ ಸರ್ಕಾರದ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಈ ಹುದ್ದೆಗೆ ಇರುವ ವ್ಯಾಪ್ತಿ ಕೂಡ ಮಹತ್ವ ಪಡೆಯುತ್ತದೆ.
ದೇಶದ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ಸದ್ಯ ಸೇನೆಯ ಮೂರೂ ಮುಖ್ಯಸ್ಥರನ್ನು ಸಂಪರ್ಕಿಸಬೇಕಾಗುತ್ತದೆ ಮತ್ತು ಈ ಮೂರೂ ಮುಖ್ಯಸ್ಥರು ವಿಭಿನ್ನ ಅಭಿಪ್ರಾಯಗಳನ್ನು ನೀಡಬಹುದಾಗಿರುತ್ತದೆ. ಒಂದೇ ಮುಖ್ಯಸ್ಥರನ್ನು ನೇಮಿಸಿದರೆ ಸರ್ಕಾರವು ಸುಲಭ ಸಂವಹನ ನಡೆಸಬಹುದು ಮತ್ತು ಸಲಹೆಯನ್ನೂ ಪಡೆಯುವುದು ಸುಲಭ ಎಂಬ ಉದ್ದೇಶದಿಂದಲೇ ಸಿಡಿಎಸ್ ಅನ್ನು ರೂಪಿಸಲಾಯಿತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಈಗಿನ ಸೇನಾ ಮುಖ್ಯಸ್ಥರಿಗಿಂತ ಮೇಲಿನ ಹುದ್ದೆಯಲ್ಲಿ ಸಿಡಿಎಸ್ ಇರಬೇಕು ಎಂಬ ಪ್ರಸ್ತಾವನೆ ಸಲ್ಲಿಸಲಾಗಿತ್ತು ಮತ್ತು ಇನ್ನೂ ಕೆಲವರು ಇವರಿಗೆ ಫೈವ್ ಸ್ಟಾರ್ ನೀಡಬೇಕು ಎಂದೂ ಪ್ರಸ್ತಾಪಿಸಿದ್ದರು. ಭಾರತಕ್ಕೆ ಯಾವ ಮಾದರಿ ಸೂಕ್ತ ಎಂದು ಹಲವು ದೇಶಗಳಲ್ಲಿರುವ ವಿವಿಧ ಮಾದರಿಗಳನ್ನು ನೋಡಿ, ಪರಿಶೀಲಿಸಿ, ಅಧ್ಯಯನವನ್ನೂ ಮಾಡಲಾಯಿತು.
ಆದರೆ, ಕೊನೆಗೂ ಅಂತಿಮವಾಗಿದ್ದು ಭಾರತದ್ದೇ ಆದ ವಿಶಿಷ್ಟ ಮಾದರಿ. ಇದನ್ನು ರಾಷ್ಟ್ರೀಯ ಭದ್ರತೆಗಾಗಿ ಮೋದಿ ಸರ್ಕಾರ ವಿಶೇಷವಾಗಿ ರೂಪಿಸಿದೆ ಎಂಬುದಂತೂ ನಿಚ್ಚಳವಾಗಿದೆ. ಈ ಕುರಿತು ಸರ್ಕಾರ ಪ್ರಕಟಣೆ ಹೊರಡಿಸಿತ್ತು. ಇದರಲ್ಲಿ ಈ ಹುದ್ದೆ ಏನು ಮಾಡುತ್ತದೆ ಎಂಬ ಕುರಿತು ಸ್ಪಷ್ಟವಾಗಿ ವಿವರಿಸಲಾಗಿದೆ: “ಎಲ್ಲ ಮೂರೂ ಸೇವೆಗಳ ವಿಚಾರದಲ್ಲಿ ರಕ್ಷಣಾ ಮಂತ್ರಿಗೆ ಪ್ರಧಾನ ಸೇನಾ ಸಲಹೆಗಾರರಾಗಿ ಕೆಲಸ ಮಾಡಲಿದ್ದಾರೆ. ತಮ್ಮ ಪಡೆಗಳಿಗೆ ಸಂಬಂಧಿಸಿದ ಕಾಳಜಿಗಳನ್ನು ವಿಶೇಷವಾಗಿ ರಕ್ಷಣಾ ಮಂತ್ರಿಗೆ ಹಿಂದಿನಂತೆಯೇ ಮುಂದೆಯೂ ಸಲಹೆ ನೀಡುತ್ತಲೇ ಇರುತ್ತಾರೆ. ಸಿಡಿಎಸ್‌ಗೆ ಯಾವುದೇ ಸೇನಾ ಕಮಾಂಡ್ ಇರುವುದಿಲ್ಲ. ಅಷ್ಟೇ ಅಲ್ಲ, ಮೂರೂ ಸೇನೆ ಮುಖ್ಯಸ್ಥರ ಮೇಲೆಯೂ ಯಾವುದೇ ಕಮಾಂಡ್ ಹೊಂದಿರುವುದಿಲ್ಲ. ಹೀಗಾಗಿ ರಾಜಕೀಯ ನಾಯಕತ್ವಕ್ಕೆ ಯಾವುದೇ ನಿಷ್ಪಕ್ಷಪಾತ ಸಲಹೆಯನ್ನು ಇವರು ನೀಡಬಲ್ಲವರಾಗಿರುತ್ತಾರೆ.”
ಹೀಗಾಗಿ ರಕ್ಷಣಾ ಸಚಿವರಿಗೆ ಕೇವಲ ಪ್ರಧಾನ ಸಲಹೆಗಾರರಾಗಿ ಸಿಡಿಎಸ್ ಕೆಲಸ ಮಾಡುತ್ತಾರೆ ಮತ್ತು ಇವರು ಸಿಂಗಲ್ ಪಾಯಿಂಟ್ ಸಲಹೆಗಾರರಾಗಿರುವುದಿಲ್ಲ. ಅಂದರೆ ಸರ್ಕಾರಕ್ಕೆ ಸೇನೆಯ ಕಡೆಯಿಂದ ಇವರು ಮಾತ್ರ ಸಲಹೆ ಮಾಡುವುದಿಲ್ಲ. ಇನ್ನೂ ಮುಂದೆ ಹೋಗಿ ಸಿಡಿಎಸ್ ಎರಡು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಒಂದು ಸಿಒಎಸ್‌ಸಿಯ ಶಾಶ್ವತ ಚೇರ್ಮನ್ ಆಗಿರುತ್ತಾರೆ. ಅಂದರೆ ಚೀಫ್ಸ್ ಆಫ್ ಸ್ಟಾಫ್ ಕಮಿಟಿಗೆ ಇವರು ಶಾಶ್ವತವಾಗಿ ಮುಖ್ಯಸ್ಥರಾಗಿರುತ್ತಾರೆ. ಎರಡನೆಯದಾಗಿ, ಡಿಎಂಎ ಮುಖ್ಯಸ್ಥರಾಗಿರುತ್ತಾರೆ. ಅಂದರೆ, ಹಣಕಾಸು ಸಚಿವಾಲಯದಲ್ಲಿರುವ ಡಿಪಾರ್ಟ್‌ಮೆಂಟ್ ಆಫ್ ಮಿಲಿಟರಿ ಅಫೇರ್ಸ್ ಅಥವಾ ಸೇನಾ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಅವರು ಇಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ.
ಇನ್ನೂ ಮಹತ್ವದ ಸಂಗತಿಯೆಂದರೆ ಸಿಡಿಎಸ್‌ಗೆ ಸಂಬಳ ಮತ್ತು ಸೌಲಭ್ಯಗಳು ಸೇನಾ ಪಡೆಯ ಮುಖ್ಯಸ್ಥರಿಗೆ ಸಮಾನವಾದ ಪ್ರಮಾಣದಲ್ಲಿ ಇರುತ್ತದೆ. ಹಾಗಂತ ಸೇನಾ ಪಡೆಗಳ ಮುಖ್ಯಸ್ಥರಿಗೆ ಸಮಾನವಾದವರಲ್ಲ. ಬದಲಿಗೆ ಇವರು ಮೂರೂ ಸೇನಾ ಪಡೆಗಳಿಗಿಂತ ಮೇಲಿನ ಹುದ್ದೆಯಲ್ಲೇ ಇರುತ್ತಾರೆ. ಈ ಮೇಲಿನ ಹುದ್ದೆ ಕೇವಲ ಶಿಷ್ಟಾಚಾರದಲ್ಲಿ ಮಾತ್ರ ಇರುತ್ತದೆ ಎಂಬುದು ಗಮನಾರ್ಹ.
ಸಿಡಿಎಸ್‌ಗೆ ನೀಡಿರುವ ಜವಾಬ್ದಾರಿಗಳಲ್ಲಿ ಈ ಕೆಲವು ಅಂಶಗಳು ಬಹಳ ಮುಖ್ಯವಾದವು. ಸೇನಾ ಪಡೆಗಳಲ್ಲಿ ನೇಮಕಾತಿ, ತರಬೇತಿ ಮತ್ತು ಸಿಬ್ಬಂದಿ ವಿಚಾರದಲ್ಲಿ ಸಮಗ್ರತೆ ಮತ್ತು ಸಮಾನತೆಯನ್ನು ಪ್ರೋತ್ಸಾಹಿಸುವುದು ಇವರ ಕೆಲಸ ಮಾಡುತ್ತದೆ. ಇದಕ್ಕಾಗಿ ಇವರು ಒಟ್ಟಾಗಿ ಯೋಜನೆ ರೂಪಿಸುವುದು ಮತ್ತು ಅವರ ಅಗತ್ಯಗಳನ್ನು ಒಟ್ಟಾಗಿ ಪರಿಗಣಿಸಬೇಕು. ಸೇನೆ ಕಾರ್ಯನಿರ್ವಹಣೆಗಳಲ್ಲಿ ಒಗ್ಗಟ್ಟನ್ನು ತರುವುದಕ್ಕಾಗಿ ಮೂರೂ ಸೇನಾ ಪಡೆಗಳಲ್ಲಿ ಸಂಪನ್ಮೂಲಗಳ ಸೂಕ್ತ ಬಳಕೆಗೆ ಇವರು ಅನುಕೂಲ ಒದಗಿಸಬೇಕು. ಇದಕ್ಕಾಗಿ ಇವರು ಜಂಟಿ ಕಮಾಂಡ್‌ಗಳನ್ನೂ ಜಾರಿಗೆ ತರಬಹುದು. ಎಲ್ಲ ಸೇನಾಪಡೆಗಳಲ್ಲಿ ದೇಶಿ ಸಲಕರಣೆಯ ಬಳಕೆಯನ್ನು ಇವರು ಉತ್ತೇಜಿಸಬೇಕು ಎಂಬುದನ್ನು ಸಿಡಿಎಸ್ ಹುದ್ದೆಯ ಧ್ಯೇಯ ಹಾಗೂ ಕರ್ತವ್ಯಗಳಲ್ಲಿ ವಿವರಿಸಲಾಗಿದೆ.
ಇವರು ಆಂತರಿಕವಾಗಿ ಮೂರೂ ಸೇನೆಗಳಲ್ಲಿ ಒಮ್ಮತವನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಇದರಿಂದ ಮೂರು ಸೇನೆಗಳು ಒಟ್ಟಾಗಿ ಕಾರ್ಯಾಚರಣೆ ಮಾಡುವುದು ಇನ್ನಷ್ಟು ಸುಲಭವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇದಾಗಲಿದೆ.
ಉಳಿದೆಲ್ಲ ಸಂಗತಿಗಳು ಅತ್ಯಂತ ಸಾಮಾನ್ಯ ಹಾಗೂ ಮೂಲ ಉದ್ದೇಶಕ್ಕೆ ಪೂರಕವಾಗಿದ್ದರೂ, ಸಿಡಿಎಸ್‌ಗಳು ಡಿಎಂಎ ಮುಖ್ಯಸ್ಥರಾಗಿ ನೇಮಕವಾಗುವುದು ಅತ್ಯಂತ ವಿಶಿಷ್ಟವಾದದ್ದಾಗಿದೆ. ಇದು ಸ್ವತಂತ್ರ್ಯ ಭಾರತದ ನಾಗರಿಕ ಹಾಗೂ ಸೇನಾ ಸಂಬಂಧದಲ್ಲಿ ಮಹತ್ವದ ಹೆಜ್ಜೆಯೂ ಆಗಿದೆ. ಒಂದು ವೇಳೆ ಸಿಡಿಎಸ್ ಹುದ್ದೆಯನ್ನು ಆಡಳಿತ ವ್ಯವಸ್ಥೆಯು ನಿರೀಕ್ಷಿಸಿದಂತೆ ಸ್ವಾಗತಿಸಿದರೆ, ಭಾರತೀಯ ಸೇನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ವ್ಯವಸ್ಥೆಯಲ್ಲಿ ಸೇನೆಯ ಮುಖ್ಯಸ್ಥರನ್ನು ಔಪಚಾರಿಕವಾಗಿ ಸೇರಿಸಿಕೊಂಡಂತೆಯೂ ಆಗುತ್ತದೆ.
ಸದ್ಯ ಭಾರತದ ರಕ್ಷಣೆಯ ಜವಾಬ್ದಾರಿಯು ಈಗಿನ ಸಾಮಾನ್ಯ ನಿಯಮದ ಪ್ರಕಾರ ರಕ್ಷಣಾ ಕಾರ್ಯದರ್ಶಿಯ ಕೈಯಲ್ಲೇ ಇರುತ್ತದೆ. ಸಾಮಾನ್ಯವಾಗಿ ಇವರು ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ ಹಿರಿಯ ನಾಗರಿಕ ಸೇವಾ ಅಧಿಕಾರಿಯೇ ಆಗಿರುತ್ತಾರೆ. ಇವರೇ ಸೇನೆ ಮತ್ತು ಅಧಿಕಾರಿಗಳ ವಲಯದಲ್ಲಿ ಸಂವಹನ ನಡೆಸುತ್ತಾರೆ ಮತ್ತು ಅದರ ಫಲವನ್ನು ಆಡಳಿತ ವ್ಯವಸ್ಥೆಗೆ ದಾಟಿಸುತ್ತಾರೆ. ಸರ್ಕಾರದ ಈ ಆಡಳಿತ ವ್ಯವಸ್ಥೆಯಲ್ಲಿ ಸಿಡಿಎಸ್ ಅನ್ನು ಹೇಗೆ ಸೇರಿಸಿಕೊಳ್ಳಲಾಗುತ್ತದೆ ಮತ್ತು ಇವರು ರಕ್ಷಣಾ ಕಾರ್ಯದರ್ಶಿಗೆ ಸಮಾನವಾದ ರೀತಿಯಲ್ಲೇ ಪರಿಗಣಿಸಲ್ಪಡುತ್ತಾರೆಯೇ ಅಥವಾ ಅವರನ್ನು ಎಕ್ಸ್ ಅಫಿಶಿಯೋ ರೀತಿ ಪರಿಗಣಿಸಲಾಗುತ್ತದೆಯೇ ಎಂಬುದನ್ನು ಇನ್ನಷ್ಟೇ ನಾವು ನೋಡಬೇಕಿದೆ.
ಮೂರು ಮುಖ್ಯ ಉದ್ದೇಶಗಳನ್ನು ಸಿಡಿಎಸ್ ಪೂರೈಸುವುದು ಅತ್ಯಂತ ನಿರ್ಣಾಯಕ ಅಂಶವಾಗಿದೆ. ಪ್ರತಿಯೊಂದು ಅಂಶವೂ ಅತ್ಯಂತ ಗಹನ ಮತ್ತು ವ್ಯಾಪಕವಾಗಿದೆ. ಒಂದು ವೇಳೆ ಈ ಮೂರು ಧ್ಯೇಯಗಳನ್ನು ಸಿಡಿಎಸ್ ಸಮರ್ಪಕವಾಗಿ ರೂಪಾಂತರಿಸಲು ಸಾಧ್ಯವಾದರೆ ಇಡೀ ಸೇನಾ ವಲಯದಲ್ಲೇ ಮಹತ್ವದ ಬದಲಾವಣೆಗೆ ಕಾರಣವಾಗಬಲ್ಲದು. ಇಡೀ ಸೇನೆಯ ದಕ್ಷತೆಯೂ ಹೆಚ್ಚಾಗಲಿದೆ. ಮೂರೂ ಸೇನೆಗಳಿಗೆ ಒಂದೇ ಕಮಾಂಡ್ ಒದಗಿಸಿರುವುದು ಮೋದಿ ಸರ್ಕಾರ ಪ್ರಸ್ತಾಪಿಸಿದ ಅತ್ಯಂತ ಮಹತ್ವದ ಮಂತ್ರದಂಡ.
ಇದಕ್ಕೆ ಸರ್ಕಾರ ಹೆಚ್ಚಿನ ಆದ್ಯತೆಯನ್ನೂ ನೀಡಿತ್ತು. ಇದು ಭಾರತೀಯ ಸೇನಾ ಪಡೆಗೆ ಒದಗಿಸಬೇಕಿರುವ ಅತ್ಯಂತ ಮಹತ್ವದ ಬದಲಾವಣೆಗೂ ಕಾರಣವಾಗಬಲ್ಲದು.1999 ರಲ್ಲಿ ಕಾರ್ಗಿಲ್ ಯುದ್ಧ ನಡೆದ ನಂತರದಲ್ಲೇ ಸೇನೆ ಇದನ್ನು ಪ್ರಸ್ತಾಪಿಸಿತ್ತು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಇಂತಹ ಪ್ರಸ್ತಾವನೆಗಳು ಜಾರಿಗೆ ಬರಲು ಹಲವು ವರ್ಷಗಳೇ ಬೇಕಾಗುತ್ತವೆ ಮತ್ತು ಇದನ್ನು ಜಾರಿಗೊಳಿಸಲು ಅತ್ಯಂತ ಉನ್ನತ ವೃತ್ತಿಪರ ಬದ್ಧತೆಯೂ ಅಗತ್ಯವಿರುತ್ತದೆ. ಅಂದಹಾಗೆ ಇದನ್ನು ಸರ್ಕಾರ ಗಮನಾರ್ಹ ಯಶಸ್ಸಿನಿಂದಲೇ ಸಾಧಿಸಿದೆ.
ಇತರ ಪ್ರಮುಖ ಅಂಶಗಳೆಂದರೆ ಸಿಡಿಎಸ್ ಮಾನವ ಮತ್ತು ಹಣಕಾಸು ಸಂಪನ್ಮೂಲಗಳನ್ನು ಅತ್ಯಂತ ದಕ್ಷವಾಗಿ ಬಳಸಿಕೊಳ್ಳುವ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಇವರು ಮಾನವ ಸಂಪನ್ಮೂಲ ಹಾಗೂ ಸೇನೆ-ನಾಗರಿಕ ಪರಿಣಿತಿಯ ಮಿಶ್ರಣದಂತಹ ಹುದ್ದೆಯಾಗಿರುತ್ತಾರೆ. ಒಂದು ಕಡೆ ಸೇನೆಯಲ್ಲಿ ಮಾನವ ಸಂಪನ್ಮೂಲ ಹಾಗೂ ಇತರ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ನಿರ್ದೇಶನಗಳನ್ನು ನೀಡುತ್ತಾರೆ. ಇದೇ ವೇಳೆ, ಸೇನೆಗೆ ಸರ್ಕಾರವು ವಾರ್ಷಿಕ ಬಜೆಟ್‌ನಲ್ಲಿ ಎಷ್ಟು ಹಣ ಮೀಸಲಿಡಬೇಕು ಎಂಬುದರ ಕುರಿತು ಸರ್ಕಾರಕ್ಕೂ ಸಲಹೆ ನೀಡುತ್ತಾರೆ. ಇವರು ಒಂದು ರೀತಿಯಲ್ಲಿ ಖಾಸಗಿ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ವಿಭಾಗ ಮಾಡುವ ಕೆಲಸವನ್ನು ಮಾಡುತ್ತಾರೆ ಎನ್ನಬಹುದೇನೋ.
ಸದ್ಯ ರಕ್ಷಣಾ ಬಜೆಟ್‌ನಲ್ಲಿ ಆಧುನಿಕ ಶಸ್ತ್ರಗಳ ಖರೀದಿಗೆ ಹೆಚ್ಚಿನ ಹಣ ಮೀಸಲಿಡುವುದಿಲ್ಲ. ಹೊಸ ತಂತ್ರಜ್ಞಾನಗಳು ಹಾಗೂ ಹೊಸ ಶಸ್ತ್ರಗಳ ಖರೀದಿಗೆ ಬಜೆಟ್‌ನಲ್ಲಿ ಅಷ್ಟೇನೂ ಗಮನ ಹರಿಸುವುದೂ ಇಲ್ಲ. ಇದರಿಂದಾಗಿ ಹೊಸ ತಂತ್ರಜ್ಞಾನ ಹಾಗೂ ಸೈಬರ್ ಸ್ಪೇಸ್ ಸ್ಪೆಕ್ಟ್ರಮ್ ಡೊಮೇನ್‌ನಂತಹ ವಿಭಾಗದಿಂದ ನಮ್ಮ ಸೇನೆ ದೂರವೇ ಉಳಿದಿದೆ. ಹೀಗಾಗಿ ಈ ನಿಟ್ಟಿನಲ್ಲಿ ಸೇನೆಗೆ ಹೊಸ ಹೊಸ ತಂತ್ರಜ್ಞಾನಗಳನ್ನು ತರುವಲ್ಲಿ ವಾರ್ಷಿಕ ಮತ್ತು 15 ವರ್ಷಗಳ ಯೋಜನೆ ರೂಪಿಸಿ ಇಡೀ ವ್ಯವಸ್ಥೆಯನ್ನು ರೂಪಾಂತರ ಮಾಡುವಲ್ಲಿ ಸಿಡಿಎಸ್‌ಗೆ ಸಾಧ್ಯವಾಗಬಹುದೇ?
ಅಗತ್ಯ ವೃತ್ತಿಪರ ಅನುಭವವನ್ನು ಸರ್ಕಾರಕ್ಕೆ ನೀಡುವುದು ಮತ್ತು ಜೀ ಹುಜೂರ್ ನೀತಿಯನ್ನು ಹೊಸಕಿ ಹಾಕಿ ರಕ್ಷಣಾ ನಿರ್ವಹಣೆಯಲ್ಲಿ ಅಗತ್ಯವಾಗಿರುವ ಮತ್ತು ಅತ್ಯಂತ ಹೆಚ್ಚು ನಿರ್ಲಕ್ಷಕ್ಕೆ ಒಳಪಟ್ಟಿರುವ ಆಧುನಿಕತೆಯನ್ನು ತರುವಲ್ಲಿ ಸಿಡಿಎಸ್ ಮಹತ್ವದ ಜವಾಬ್ದಾರಿಯನ್ನು ಹೊಂದಿದೆ. ಅತ್ಯಂತ ಮುಖ್ಯ ಸಂಗತಿಯೆಂದರೆ ಈ ಮಹತ್ವದ ಕಾರ್ಯಕ್ಕೆ ಮೋದಿ ಸರ್ಕಾರ ಶಂಕುಸ್ಥಾಪನೆ ಮಾಡಿದೆ. ರಾಜಕೀಯ ನಾಯಕರು, ಆಡಳಿತ ಮತ್ತು ಸೇನೆ, ಈ ಮೂರೂ ಈ ಸಿಡಿಎಸ್ ಅನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಇದನ್ನು ಹೇಗೆ ಪೋಷಿಸುತ್ತಾರೆ ಎಂಬುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಒಂದು ವೇಳೆ ಡಿಎಂಎ ಹಾಗೂ ಸಿಡಿಎಸ್ ಅನ್ನು ಉತ್ತಮವಾಗಿ ಸ್ವೀಕರಿಸಿದಲ್ಲಿ ಭಾರತದ ಸೇನಾ ವ್ಯವಸ್ಥೆಯಲ್ಲಿ ಒಂದು ಮಹತ್ವದ ರೂಪಾಂತರ ಹಾಗೂ ಆಧುನಿಕತೆ ಲಭ್ಯವಾಗುವುದಂತೂ ನಿಶ್ಚಿತ.
ಭಾರತೀಯ ಆರ್ಥಿಕತೆಗೆ ನರಸಿಂಹ ರಾವ್ ಮಾಡಿದಂತೆಯೇ ಭಾರತದ ರಕ್ಷಣಾ ವಲಯವನ್ನು ಪ್ರಧಾನಿ ಮೋದಿ ಬದಲಾವಣೆ ಮಾಡಬಹುದೇ?