ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಮಗ್ರ ವಿವರಗಳ ನ್ಯಾಯಾಂಗ ತನಿಖೆ ನಡೆಯಲಿ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಸಂಕೇತ್ ಏಣಗಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ರಮೇಶ್ ಜಾರಕಿಹೊಳಿ ಕಡೆಯಿಂದ ಒಂದು ದೂರು ದಾಖಲಾಗಿದೆ. ಇದಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಒಂದು ದೂರು ನೀಡಿದ್ದಾರೆ.
ಇದಲ್ಲದೆ ಪ್ರಕರಣದ ಯುವತಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮತ್ತೊಂದೆಡೆ ಯುವತಿಯ ಪಾಲಕರ ವಿಚಾರಣೆಯನ್ನು ಎಸ್ಐಟಿ ನಡೆಸಿದೆ. ಪಾಲಕರು ಸಹ ತಮ್ಮ ಹೇಳಿಕೆ ನೀಡಿದ್ದಾರೆ. ಇಡೀ ಪ್ರಕರಣ ಒಂದಷ್ಟು ಗೊಂದಲಗಳನ್ನು ಹುಟ್ಟು ಹಾಕುತ್ತಿದೆ.
ಎಸ್ಐಟಿ ತನಿಖೆಯು ಸೇರಿ ಒಟ್ಟಾರೆ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು. ಇದರಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ತಿಳಿಸಿದರು.
ರಾಮ ರಾಜ್ಯವೋ, ರಾವಣನ ರಾಜ್ಯವೋ?: ಇಂದು ಹೋಳಿ ಜತೆಗೆ ಕಾಮದಹನ ಕೂಡ ಇದೆ. ರಾಜ್ಯದಲ್ಲಿ ಕಾಮ ಕ್ರೋಧಗಳು ತಾಂಡವವಾಡುತ್ತಿವೆ. ಅದನ್ನು ದಹನ ಮಾಡುವಂತಾಗಲಿ. ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ಕಾಮಗಾರಿ ಆರಂಭವಾಗಿದೆ.
ದೇವಸ್ಥಾನ ಕಟ್ಟುವ ಮೊದಲ ವರ್ಷದಲ್ಲೇ ಒಂದು ಹೆಣ್ಣು ಮಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನೋಡಿದ್ರೆ ರಾಮ ರಾಜ್ಯವೋ ರಾವಣನ ರಾಜ್ಯವೋ ಎನಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ: ಬೆಳಗಾವಿ ಜನರು ನನ್ನನ್ನು ಸ್ವಾಗತಿಸಿದ್ದಾರೆ.. ರಮೇಶ್ ಜಾರಕಿಹೊಳಿ ಬೆಂಬಲಿಗರ ಆಕ್ರೋಶಕ್ಕೆ ಡಿಕೆಶಿ ವ್ಯಂಗ್ಯ
ನಿರ್ಭಯಾ ಪ್ರಕರಣ ವರದಿ ಅಥವಾ ನನ್ನ ನೇತೃತ್ವದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿ ನೀಡಿದ 6 ಸಾವಿರ ಪುಟದ ವರದಿಯಲ್ಲಿ ಇಂತಹ ಸಂದರ್ಭದಲ್ಲಿ ಪೊಲೀಸರು ಯಾವ ರೀತಿ ನಡೆದುಕೊಳ್ಳಬೇಕು ಅಂತಾ ಹೇಳಲಾಗಿದೆ. ನಿತ್ಯ ಆ ಹೆಣ್ಣು ಮಗಳು ನನಗೆ ರಕ್ಷಣೆ ಇಲ್ಲ, ಕುಟುಂಬಸ್ಥರಿಗೆ ರಕ್ಷಣೆ ಇಲ್ಲ ಅಂತಾ ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಕಾನೂನು ಪರಿಪಾಲನೆ ಇದ್ದಿದ್ದೇ ಆದ್ರೇ, ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಾಗ ಏಕೆ ಪ್ರಕರಣ ದಾಖಲು ಮಾಡಿಕೊಳ್ಳಲಿಲ್ಲ. ಎಫ್‌ಐಆರ್ ದಾಖಲಾಗಾದೆ. ಎಸ್‌ಐಟಿ ರಚನೆ ಹೇಗೆ ಮಾಡಿದ್ರಿ? ಆ ವ್ಯಕ್ತಿ ಬೆಂಗಳೂರಿನಲ್ಲೇ ಇದ್ರೂ ಬೇರೆ ವ್ಯಕ್ತಿ ಕೈಯಲ್ಲಿ ಹೇಗೆ ದೂರು ಕೊಡಿಸಿದ್ರಿ? ಆ ಯುವತಿಯ ಪೋಷಕರು ವಿಜಯಪುರ ಮೂಲದವರಾಗಿದ್ದರೂ ಬೆಳಗಾವಿಗೆ ಕರೆದುಕೊಂಡು ಹೋಗಿ ಅಲ್ಲಿ ದೂರು ಕೊಡಿಸಿದ್ದು ಏಕೆ? 376 ಕೇಸ್ ದಾಖಲಾಗಿದ್ರೇ ಸಾಮಾನ್ಯ ವ್ಯಕ್ತಿಗಳನ್ನ ಸುಮ್ನೆ ಬಿಡ್ತಿದ್ರಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮರ್ಯಾದೆ ಏನಾಗ್ತಿದೆ? : ರಾಜ್ಯ ಸರ್ಕಾರದ ರಿಮೋಟ್ ಕಂಟ್ರೋಲರ್ ಆಗಿ ಯಾರು ಇದ್ದಾರೆ. ಆ ಯುವತಿ ಜೊತೆ ಯಾವ ಸಂಪರ್ಕವೂ ಇರಲಿಲ್ಲ ಎಂದು ನಮ್ಮ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 376 ಅಡಿ ಆರೋಪಿಯಾಗಿರುವ ವ್ಯಕ್ತಿಯನ್ನು ಎಸ್‌ಐಟಿ ಮೊದಲು ಬಂಧಿಸಬೇಕು.
ಎಸ್‌ಐಟಿ ತನಿಖೆಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಗಬೇಕು ಅನ್ನೋದು ನಮ್ಮ ಪಕ್ಷದ ಆಗ್ರಹ. ಇಲ್ಲದಿದ್ದರೆ ಅಧಿಕಾರವನ್ನ ಮಿಸ್ ಯೂಸ್ ಮಾಡಿಕೊಳ್ತಾರೆ. ರಾಜ್ಯದ ಮರ್ಯಾದೆ ಮೂರು ಕಾಸಿಗೆ ಹೋಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಟಿ ಅವರೇ ಉತ್ತರಿಸಬೇಕು : ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ ಮಾತನಾಡಿ, ಬಿಜೆಪಿ ಅನಾಚಾರದ ಅನಾವರಣದ ರಸಮಂಜರಿ ನಡೆಯುತ್ತಿದೆ. ಮಾರ್ಚ್ 2ರ ರಾತ್ರಿ ಆ ಸಿಡಿಯಲ್ಲಿರೋದು ನಾನಲ್ಲ ಎಂದು ಹೇಳ್ತಾರೆ. ಮಾರ್ಚ್ 3ರಂದು ರಮೇಶ್ ಜಾರಕಿಹೊಳಿ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಹನಿಟ್ರ್ಯಾಪ್ ಅಂತಾ ಹೇಳ್ತಾರೆ. ಮಾರ್ಚ್ 6 ರಂದು 6 ಸಚಿವರು ಕೋರ್ಟ್ಗೆ ತೆರಳಿ ತಡೆಯಾಜ್ಞೆ ತರ್ತಾರೆ.
ಆ ನಂತರ ಬಾಲಚಂದ್ರ ಜಾರಕಿಹೊಳಿ ಪರ ಹಲವು ವರ್ಷಗಳಿಂದ ವಕೀಲರಾಗಿದ್ದವರು ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ವಾಪಸ್ ಪಡೆಯೋಕೆ ಹೋಗಿದ್ರು. ಎಫ್‌ಐಆರ್ ಇಲ್ಲದೇ ಫೋನ್ ಟ್ಯಾಪ್ ಮಾಡುವಂತಿಲ್ಲ. ಆದ್ರೆ, ಮೊನ್ನೆ ರಮೇಶ್ ಜಾರಕಿಹೊಳಿ ಆಡಿಯೋ ರಿಲೀಸ್ ಮಾಡಿದ್ದಾರೆ.
ಅದು ರಮೇಶ್ ಜಾರಕಿಹೊಳಿ ಫೋನ್ ಟ್ಯಾಪ್ ಮಾಡಿಸ್ತಿದ್ದಾರೆ ಅನಿಸುತ್ತಿದೆ. ಇಲ್ಲ ಎಸ್‌ಐಟಿಯವರೇ ಆಡಿಯೋ ರಮೇಶ್ ಜಾರಕಿಹೊಳಿಗೆ ಕೊಟ್ಟಿರಬೇಕು ಅನಿಸುತ್ತಿದೆ. ಇದಕ್ಕೆ ಎಸ್‌ಐಟಿ ಉತ್ತರ ಕೊಡಬೇಕಾಗುತ್ತೆ ಎಂದರು.
ಸರ್ಕಾರ ರಕ್ಷಣೆಗೆ ನಿಂತಿದೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಪೊಲೀಸ್ ಮತ್ತು ಸರ್ಕಾರ ಅವರ ರಕ್ಷಣೆಗೆ ನಿಂತಿದೆ. ಕೂಡಲೇ ಅವರನ್ನ ಬಂಧಿಸಬೇಕು. ಇಲ್ಲದಿದ್ದರೇ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ. ಮೂರು ಕ್ಷೇತ್ರಗಳಲ್ಲಿ ಸೋಲುತ್ತೇವೆ ಅಂತಾ ಗೊತ್ತಾಗಿದೆ. ಅದಕ್ಕಾಗಿ ರಾಜಕೀಯ ಷಡ್ಯಂತ್ರ ಮಾಡ್ತಿದ್ದಾರೆ. ಈಗಾಗಲೇ ನಮ್ಮ ಅಧ್ಯಕ್ಷರು ನನ್ನದೇನು ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.
ರಾಜಕೀಯ ಮಧ್ಯಪ್ರವೇಶ : ಕೆಪಿಸಿಸಿ ವಕ್ತಾರ ದಿವಾಕರ್ ಮಾತನಾಡಿ, ತನಿಖೆಯಲ್ಲಿ ರಾಜಕೀಯ ಮಧ್ಯ ಪ್ರವೇಶ ಆಗುತ್ತಿದೆ. ಇದರಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲ್ಲ. 376 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಬಹಿರಂಗವಾಗಿ ಪ್ರೆಸ್‌ಮೀಟ್ ಮಾಡುತ್ತಿದ್ದಾರೆ.
ಸಾಮಾನ್ಯ ಡಿಜೆ ಹಳ್ಳಿ ಪ್ರಕರಣ ಆದಾಗ ಯಾವ ತರಹ ತನಿಖೆ ಮಾಡಿದ್ರಿ, ಬೇರೆಯವರ ಮೇಲೆ ಎಫ್‌ಐಆರ್ ಆದಾಗ ಯಾವ ರೀತಿ ನಡೆದುಕೊಂಡಿದ್ದೀರಿ. ಆದ್ರೆ, ಈ ಪ್ರಕರಣದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರು.