ಬೆಂಗಳೂರು: ಸಿಡಿ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದ್ದಾರೆ ಎನ್ನಲಾಗುತ್ತಿರುವ ಶ್ರವಣ್ ಸೋದರ ಚೇತನ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಂದೆ ಸೂರ್ಯಕುಮಾರ್ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಶೇಷ ತನಿಖಾ ತಂಡ (ಎಸ್ಐಟಿ) ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಸಿಡಿ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ ತಮ್ಮ ಪುತ್ರನನ್ನು ಎಸ್ಐಟಿ ಪೊಲೀಸರು ಅಕ್ರಮ ಬಂಧನದಲ್ಲಿ ಇರಿಸಿದ್ದು, ಆತನನ್ನು ನ್ಯಾಯಾಲಯದ ಎದರು ಹಾಜರುಪಡಿಸುವಂತೆ ಕೋರಿ ಚೇತನ್ ತಂದೆ ಸೂರ್ಯಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರ ವಾದ ಆಲಿಸಿದ ಪೀಠ, ಗೃಹ ಇಲಾಖೆ, ಎಸ್ಐಟಿ, ಕಬ್ಬನ್ ಪಾರ್ಕ್, ಸದಾಶಿವನಗರ ಠಾಣೆ ಪೊಲೀಸ್ ಇನ್ಸಪೆಕ್ಟರ್ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರ ಪೋಷಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ, ಪ್ರಕರಣಕ್ಕೆ ಸಂಬಂಧವಿಲ್ಲದ ಚೇತನ್ನನ್ನು ಪೊಲೀಸರು ಕರೆದೊಯ್ದಿರುವುದಾಗಿ ಹೇಳಲಾಗಿದೆ. ಹಾಗೆಯೇ, ಮಾರ್ಚ್ 16ರಿಂದ ಚೇತನ್ ನಾಪತ್ತೆಯಾಗಿದ್ದು, ಆತನನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದರು.
ಓದಿ : ಐಎಂಎ ಹಗರಣ: ಆಸ್ತಿ ಮುಟ್ಟುಗೋಲಿಗೆ ಸರ್ಕಾರಕ್ಕೆ ಅಧಿಕಾರವಿದೆ ಎಂದ ಹೈಕೋರ್ಟ್
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಚೇತನ್ ಎಲ್ಲಿದ್ದಾನೆ ಎಂದು ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿತು. ಪೀಠಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರು ಚೇತನ್ ಅವರಿಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಚೇತನ್ ಮಾ. 18ರಂದು ವಿಚಾರಣೆಗೆ ಹಾಜರಾಗಿದ್ದ. ಮಾ.20ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಲ್ಲಿದ್ದಾನೆಂಬ ಮಾಹಿತಿ ಇಲ್ಲ ಎಂದು ಪೀಠದ ಗಮನಕ್ಕೆ ತಂದರು.