ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪಿ ಶ್ರವಣ್ ಸಹೋದರ ಚೇತನ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿ ಆದೇಶಿಸಿದೆ.
ತಮ್ಮ ಪುತ್ರ ಚೇತನ್ನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿ ಚೇತನ್ ತಂದೆ ಸೂರ್ಯ ಕುಮಾರ್ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಇಂದು ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗತ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕಾಣೆಯಾಗಿರುವ ಚೇತನ್ ತಂದೆ ಪೀಠಕ್ಕೆ ಹೇಳಿಕೆ ನೀಡಿ ತಮ್ಮ ಪುತ್ರ ಸಂಬಂಧಿಕರೊಂದಿಗೆ ತಿರುಪತಿಗೆ ಹೋಗಿದ್ದು, ನಮ್ಮನ್ನು ಸಂಪರ್ಕಿಸಿದ್ದಾನೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಪೀಠ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ಅಭಿಯೋಜಕರು ವಾದಿಸಿ, ಚೇತನ್ನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿಲ್ಲ. ಅರ್ಜಿದಾರರ ಪರ ವಕೀಲರು ನಿನ್ನೆ ಮಧ್ಯಾಹ್ನ 1.30ಕ್ಕೆ ಆತನನ್ನು ಸಂಪರ್ಕಿಸಿದ್ದಾರೆ. ಅವರ ಸೂಚನೆ ಮೇರೆಗೆ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಆರೋಪಿಸಿದರು. ಸರ್ಕಾರಿ ಅಭಿಯೋಜಕ ಆರೋಪಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಪೊಲೀಸರು ಕಾನೂನು ಬಾಹಿರವಾಗಿ ತಮ್ಮ ಮೊಬೈಲ್ ಕದ್ದಾಲಿಸಿದ್ದಾರೆ. ಇದು ಸಮಂಜಸವಲ್ಲ ಎಂದರು.
ಓದಿ: ಸಿಡಿ ಪ್ರಕರಣ: ಶ್ರವಣ್ ಸೋದರ ಚೇತನ್ ಅಕ್ರಮ ಬಂಧನ ಆರೋಪ, ಪೋಷಕರಿಂದ ಹೈಕೋರ್ಟ್‌ಗೆ ಅರ್ಜಿ