ಬೆಂಗಳೂರು : ಸಿಡಿ ಪ್ರಕರಣ ಸಂಬಂಧ ಯುವತಿ ಪರವಾಗಿ ದೂರು ನೀಡಿದ್ದ ವಕೀಲ ಜಗದೀಶ್, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಂದ ಯುವತಿಗೆ ಜೀವ ಬೆದರಿಕೆಯಿದೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿದ್ದಾರೆ. ಕಮಿಷನರ್ ಇಲ್ಲದ್ದರಿಂದ ಕಬ್ಬನ್ ಪಾರ್ಕ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಶುಕ್ರವಾರ ಎಫ್ಐಆರ್ ದಾಖಲಾದ ನಂತರ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಮಾಧ್ಯಮಗಳ ಮೂಲಕ ದೂರುದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆರೋಪಿತ ವ್ಯಕ್ತಿ ಬಹಳ ಪ್ರಭಾವಿಯಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ. ಅಲ್ಲದೆ ಯುವತಿಯ ಆಡಿಯೋವನ್ನ ಬಹಿರಂಗಗೊಳಿಸಲಾಗಿದೆ. ಇಂದು ಸಂಜೆ ಬಿಗ್ ನ್ಯೂಸ್ ನೀಡುವುದಾಗಿಯೂ ಹೇಳಿದ್ದಾರೆ. ಇದರಿಂದ ಯುವತಿಗೆ ಪ್ರಾಣ ಭಯವಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ದೂರಿನ ಪ್ರತಿಯಲ್ಲಿ ವಕೀಲ ಜಗದೀಶ್ ಉಲ್ಲೇಖಿಸಿದ್ದಾರೆ..
ಯುವತಿ ಪೋಷಕರಿಗೆ ರಕ್ಷಣೆ ಕೊಡಿ
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಆಡುಗೋಡಿ ಟೆಕ್ನಿಕಲ್ ಸೆಂಟರ್ಗೆ ವಕೀಲ ಜಗದೀಶ್ ತೆರಳಿದ್ದಾರೆ. ಯುವತಿ ಕುಟುಂಬಸ್ಥರು ಎಸ್ಐಟಿ ವಿಚಾರಣೆಗೆ ಒಳಗಾಗಿದ್ದಾರೆ. ತನಿಖೆ ಮುಗಿಯುವರೆಗೂ ಸೂಕ್ತ ಕಡೆ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಬೇಕು. ಜೊತೆಗೆ ಪೊಲೀಸ್ ಭದ್ರತೆ ನೀಡಬೇಕೆಂದು ತನಿಖಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ನನ್ನ ಮಗಳು ನಿರಾಪರಾಧಿ
ಯುವತಿಯ ಸಂಪರ್ಕದ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಸಿಡಿ ಬಿಡುಗಡೆ ಕೂಡ ತುಂಬಾ ತಡವಾಗಿ ಗೊತ್ತಾಯಿತು. ತನ್ನ ಮಗಳು ಆ ರೀತಿ ಮಾಡಲ್ಲ. ಯಾರೋ ಬಲವಂತವಾಗಿ ಆಕೆಯಿಂದ ಈ ರೀತಿ ಮಾಡಿಸುತ್ತಿದ್ದಾರೆ. ನನ್ನ ಮಗಳು ನಿರಪರಾಧಿ, ಅವಳದ್ದೇನು ತಪ್ಪಿಲ್ಲ ಎಂದು ಪೋಷಕರು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.