ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.
ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ 51 ನೇ ಆರೋಪಿಯಾಗಿದ್ದಾರೆ. ಗಲಭೆ ನಡೆದಾಗ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ 300 ಮೀಟರ್ ದೂರದಲ್ಲಿ ಆಪ್ತ ಸಂತೋಷ್ ಮನೆಯಲ್ಲಿದ್ದುಕೊಂಡು ಮಾಜಿ ಮೇಯರ್ ಸಂಪತ್ ರಾಜ್ ಗಲಭೆಯ ಅಪ್ಡೇಟ್ ಪಡೆದುಕೊಳ್ಳುತ್ತಿದ್ದರು ಎಂಬ ವಿಚಾರವನ್ನು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಕೊಲೆಗೂ ಸ್ಕೆಚ್ ಹಾಕಲಾಗಿತ್ತು. ಅದೃಷ್ಟವಶಾತ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಮನೆಗೆ ಬೆಂಕಿ ಹಚ್ಚಲು ನಡೆದಿತ್ತು ಫಡಿಂಗ್ :
ಶಾಸಕ ಅಂಖಡ ಶ್ರೀನಿವಾಸಮೂರ್ತಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕಿರ್, ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಇಡಲು ತನ್ನ ಆಪ್ತರ ಮುಖಾಂತರ ಫಡಿಂಗ್ ಮಾಡಿದ್ದರು. ಪ್ರತಿಭಟನೆ ಮಾಡಲು ಬರುವ ಹುಡುಗರಿಗೆ ಉಚಿತವಾಗಿ ಪೆಟ್ರೋಲ್ ಕೊಡುವಂತೆ ಸ್ಥಳೀಯ ಪೆಟ್ರೋಲ್ ಬಂಕ್ ಮಾಲೀಕನಿಗೆ ಹೇಳಿದ್ದರು. ಸಂಪತ್ ಹೆಸರು ಯಾರು ಹೇಳ್ತಾರೆ ಅವರಿಗೆ ಪೆಟ್ರೋಲ್ ಕೊಡಿ ಎಂದಿದ್ದರು. ಸಂಪತ್ ರಾಜ್ ಪಿಎ ಅರುಣ್ ಇಡೀ ಪ್ರಕರಣದ ಉಸ್ತುವಾರಿ ವಹಿಸಿಕೊಂಡು, ಕಾವಲ್ ಬೈರಸಂದ್ರ ಬಸ್ ಸ್ಟ್ಯಾಂಡ್ ಬಳಿ ಪುಂಡರಿಗೆ ಹಣ ಕೊಟ್ಟಿದ್ದ ಎನ್ನಲಾಗಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
200 ಕ್ಕೂ ಹೆಚ್ಚು ಮೊಬೈಲ್, ಸಿಸಿ ಟಿವಿ ದೃಶ್ಯ, 100 ಮಂದಿ ಪ್ರತ್ಯಕ್ಷ್ಯದರ್ಶಿಗಳ ಹೇಳಿಕೆ :
ಪ್ರಕರಣದಲ್ಲಿ ಸಂಪತ್ ರಾಜ್ ಹೆಸರು ಕೇಳಿ ಬಂದ ತಕ್ಷಣ, ಸಿಸಿಬಿ ಪೊಲೀಸರು ಗಲಭೆ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಸಂಪತ್ರಾಜ್ ಚಲನವಲನಗಳನ್ನು ಗಮನಿಸಲಾಗಿದೆ. ಆರೋಪಿಗಳಿಗೆ ಮಾಜಿ ಮೇಯರ್ ಹಾಗೂ ಮಾಜಿ ಕಾರ್ಪೋರೆಟರ್ ಆಪ್ತರು ಹಣ ಹಂಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಜೊತೆಗೆ, ಸಂಪತ್ ರಾಜ್ , ಅರುಣ್ ರಾಜ್, ಮತ್ತು ಮುಜಾಮಿಲ್ ನಡುವಿನ ಸಂಭಾಷಣೆ, ವಾಟ್ಸ್ ಆ್ಯಪ್ ಸಂದೇಶಗಳನ್ನು ಕೂಡ ಸಾಕ್ಷಿಯಾಗಿ ಪರಿಗಣಿಸಲಾಗಿದೆ.
ಸದ್ಯ, ಅನಾರೋಗ್ಯವೆಂದು ವೈದ್ಯರು ಸರ್ಟಿಫಿಕೇಟ್ ನೀಡಿರುವ ಕಾರಣ, ಸಂಪತ್ ರಾಜ್ ಬಂಧನವಾಗಿಲ್ಲ. ಚಿಕಿತ್ಸೆ ಬಳಿಕ ಬಂಧಿಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ನಿರೀಕ್ಷಣಾ ಜಾಮೀನು ಪಡೆಯಲು ಸಂಪತ್ ರಾಜ್ ಕೂಡ ತಯಾರಿ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.