ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಬುಕ್ಕಿಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಶೋಧ ಮುಂದುವರೆಸಿದ್ದಾರೆ.
ಕೆಪಿಎಲ್ ಆಟಗಾರರ ಜೊತೆ ಸಂಪರ್ಕ ಹೊಂದಿದ್ದ ಮಾಡೆಲ್ಗಳನ್ನು ನಿನ್ನೆ ವಿಚಾರಣೆ ನಡೆಸಲಾಗಿದೆ. ಆ ವೇಳೆ ಮಾಡೆಲ್ಗಳು ಕೆಲ ಬುಕ್ಕಿಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆ ಸಿಸಿಬಿ ಈಗ ಐವರು ಬುಕ್ಕಿಗಳ ಬೆನ್ನುಬಿದ್ದಿದೆ. ಆದರೆ, ಬುಕ್ಕಿಗಳ ಬಗ್ಗೆ ಮಾಹಿತಿ ಹೊರ ಬೀಳುತ್ತಿದ್ದಂತೆ ಅವರು ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಏರ್ಪೋರ್ಟ್ಗಳಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಈ ಐವರು ಬುಕ್ಕಿಗಳ ಬಂಧನ ಮಾಡಿದರೆ ಕೆಲ ಪ್ರತಿಷ್ಠಿತ ಆಟಗಾರರ ಹೆಸರು ಹೊರಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ದೋಷಾರೋಪ ಪಟ್ಟಿ ಸಲ್ಲಿಕೆ:
ಈಟಿವಿ ಭಾರತ್ ಜೊತೆ ಮಾತನಾಡಿದ ತನಿಖಾಧಿಕಾರಿಯೊಬ್ಬರು, ಕೆಪಿಎಲ್ ಹಗರಣದ ತನಿಖೆ ನಡೆದ ದಿನದಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಬೆಳವಣಿಗೆಗಳ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿದ್ದೇವೆ. ಪ್ರಮುಖವಾಗಿ ಇದರಲ್ಲಿ ಕೆಪಿಎಲ್ ಮಾಲೀಕ, ಕ್ರಿಕೆಟ್ ಕೋಚ್ಗಳು, ಕೆಲ ಪ್ರತಿಷ್ಟಿತ ಬೌಲರ್‌ಗಳು, ಆಟಗಾರರು ಹಾಗು ಬುಕ್ಕಿಗಳ ಮಾಹಿತಿ, ನಟಿಯರು ಹಾಗೂ ಮಾಡೆಲ್ಗಳ ಉಲ್ಲೇಖ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.