ಬೆಂಗಳೂರು: ಟರ್ಫ್ ಕ್ಲಬ್ ಮೇಲೆ ಶುಕ್ರವಾರ ದಾಳಿ ಮಾಡಿದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಕೆಲ ಬುಕ್ಕಿಗಳನ್ನ ವಶಕ್ಕೆ ಪಡೆದು, 3.47 ಕೋಟಿ ರೂ ಜಪ್ತಿ ಮಾಡಿದ್ದಾರೆ. ಕ್ಲಬ್‌ನಲ್ಲಿ ಅಕ್ರಮವಾಗಿ ವ್ಯವಹರಿಸುತ್ತಿದ್ದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬುಕ್ ಮೇಕರ್ಸ್ ಮೇಲೆ ದಾಳಿ ನಡೆಸಿ ನಗದು ವಶಪಡಿಸಿಕೊಳ್ಳಲಾಗಿದೆ.
ಜಿಎಸ್‌ಟಿ ಪಾವತಿಯಲ್ಲಿ ವಂಚನೆ, ಅಕ್ರಮ ಬೆಟ್ಟಿಂಗ್, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟದ ಕುರಿತು ದೂರು ಬಂದಿತ್ತು. ಅದರನ್ವಯ ದಾಳಿ ನಡೆಸಿ ಕೌಂಟರ್‌ಗಳಲ್ಲಿ ತಪಾಸಣೆ ನಡೆಸಿದ್ದು, ರೇಸ್‌ಕೋರ್ಸ್ ಸಿಬ್ಬಂದಿ ವಿಚಾರಣೆ ನಡೆಸಲಾಗಿದೆ. ವಿಕ್ರಾಂತ್ ಎಂಟರ್‌ಪ್ರೈಸಸ್, ನಿರ್ಮಲ್ ಅಂಡ್ ಕೋ, ಚಾಮುಂಡೇಶ್ವರಿ ಎಂಟರ್‌ಪ್ರೈಸಸ್, ಶ್ರೀರಾಮ ಎಂಟರ್‌ಪ್ರೈಸಸ್, ಆರ್.ಆರ್.ಎಂಟರ್‌ಪ್ರೈಸಸ್, ರಾಯಲ್ ಇಎನ್‌ಟಿಪಿ, ಆರ್.ಕೆ.ಎಂಟರ್‌ಪ್ರೈಸಸ್, ಎಎ ಅಸೋಸಿಯೇಟ್ಸ್, ಸಾಮ್ರಾಟ್ ಆ್ಯಂಡ್ ಕೋ, ಮೆಟ್ರೊ ಅಸೋಸಿಯೇಟ್ಸ್ ಕೌಂಟರ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿ ನಗದು ಮತ್ತು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2019ರ ಡಿಸೆಂಬರ್‌ನಲ್ಲಿ ಸಹ ಬೆಂಗಳೂರು ಟರ್ಫ್ ಕ್ಲಬ್‌ನ ಬುಕ್ಕಿ ಕೌಂಟರ್‌ಗಳಲ್ಲಿ ಸಿಸಿಬಿ ಪೊಲೀಸರು ಶೋಧ ನಡೆಸಿ ದಾಖಲೆ ಇಲ್ಲದ 96 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದರು.
ಅಕ್ರಮ ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ(ಬೆಂಗಳೂರು): ಇತ್ತೀಚಿಗೆ, ಚಿನ್ನದ ವ್ಯಾಪಾರಿಯ ಫ್ಲ್ಯಾಟ್ನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಆರು ಜನ ಆರೋಪಿಗಳನ್ನು ಬಂಧಿಸಿದ್ದರು. ಜಿನೇಂದ್ರ, ಮನೀಶ್, ಮುಕೇಶ್, ಲಲಿತ್, ರೋಹಿತ್ ಹಾಗೂ ಸಂಜಯ್ ಬಂಧಿತ ಆರೋಪಿಗಳು. ಜೂಜಾಟದ ಸ್ಥಳದಲ್ಲಿದ್ದ ದಾಖಲೆ ಇಲ್ಲದ ಎರಡು ಹಣದ ಬ್ಯಾಗ್ಗಳು ಪತ್ತೆಯಾಗಿದ್ದು, ಒಟ್ಟು 85 ಲಕ್ಷ ರೂ ಹಣ ಜಪ್ತಿ ಮಾಡಲಾಗಿತ್ತು.
ಜನವರಿ 7ರಂದು ಜೆ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಸರ್ಕಲ್ ಬಳಿಯಿರುವ ಪಾರ್ಕ್ ವೆಸ್ಟ್ ಅಪಾರ್ಟ್‌ಮೆಂಟಿನಲ್ಲಿರುವ ರಾಜ್ ಜೈನ್ ಎಂಬಾತನ ಫ್ಲ್ಯಾಟಿನಲ್ಲಿ ಜೂಜು ಆಟ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳ ತಂಡ ಆಟದ ಟೇಬಲ್ ಮೇಲಿದ್ದ 1.48 ಲಕ್ಷ ಹಣ ಜಪ್ತಿ ಮಾಡಿದ್ದರು. ಅದೇ ಫ್ಲ್ಯಾಟ್ನಲ್ಲಿ ಶೋಧ ನಡೆಸಿದಾಗ 85.39 ಲಕ್ಷ ರೂ ಪತ್ತೆಯಾಗಿತ್ತು. ಹಣದ ಬ್ಯಾಗ್ಗಳಿದ್ದ ಮನೆ ಮಾಲೀಕ ರಾಜ್ ಜೈನ್ ಪರಾರಿಯಾಗಿದ್ದ. ಚಿನ್ನದ ವ್ಯಾಪಾರಿಯಾಗಿರುವ ರಾಜ್ ಜೈನ್ ಈ ಹಿಂದೆ ಚಿನ್ನ ಕಳವಾಗಿದೆ ಎಂದು ಸುಳ್ಳು ದೂರು ನೀಡಿದ್ದನು. ತನಿಖೆ ಕೈಗೊಂಡಾಗ ರಾಜ್ ಜೈನ್ ಕಳ್ಳಾಟ ಬಯಲಾಗಿತ್ತು.
ಇದನ್ನೂ ಓದಿ: ಬೆಂಗಳೂರು: ಆತ್ಮಾಹುತಿ ದಾಳಿಗೆ ಸಂಚು ಪ್ರಕರಣ; ಎಲ್ಇಟಿಯ ಎಂಟು ಸದಸ್ಯರ ವಿರುದ್ಧ ಎನ್ಐಎ ಚಾರ್ಜ್ಶೀಟ್