ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಸಂಪೂರ್ಣವಾಗಿ ಭದ್ರತೆ ಕೊಡುತ್ತೇನೆಂದು ತಿಳಿಸಿದ್ದಾರೆ. ಸದ್ಯ 15 ನಟ-ನಟಿಯರ ಹೆಸರನ್ನು ಇಂದ್ರಜಿತ್ ಪೊಲೀಸರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಸ್ಯಾಂಡಲ್ವುಡ್ ನಟ-ನಟಿಯರಿಗೆ ಸಂಕಷ್ಟ ಎದುರಾಗಿದ್ದು, ಇಂದ್ರಜಿತ್ ಲಂಕೇಶ್ ಹೇಳಿರುವ ಆ ನಟ-ನಟಿಯರಿಗೆ ಸಿಸಿಬಿ ಡ್ರಿಲ್ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಆ. 15 ನಟ, ನಟಿಯರಿಗೆ ನೋಟಿಸ್ ನೀಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಚಂದನವನದ ಡ್ರಗ್ಸ್ ಜಾಲದ ಬಗ್ಗೆ ಕೆಲ ದಾಖಲೆಗಳನ್ನು ಆಧರಿಸಿ ನೋಟಿಸ್ ನೀಡಲು ನಿರ್ಧಾರ ಮಾಡಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಗಮನಕ್ಕೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಎಲ್ಲಾ ಮಾಹಿತಿ ನೀಡಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾಗೆ ರೋಚಕ ತಿರುವು ಸಿಕ್ಕಿದೆ.
ಮತ್ತೊಂದೆಡೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ಕರೆದಿದ್ದು, ಹೆಚ್ಚುವರಿ ಆಯುಕ್ತರು ಹಾಗೂ ಎಲ್ಲಾ ವಲಯದ ಡಿಸಿಪಿಗಳು ಭಾಗಿಯಾಗಿದ್ದಾರೆ.