ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಲು ಕರೆತಂದಿದ್ದ 9 ಯುವತಿಯರನ್ನು ಸಿಸಿಬಿ ಪೊಲೀಸರು ದಾಳಿ ನಡೆಸಿ ರಕ್ಷಿಸಿದ್ದು, ಓರ್ವನನ್ನು ಬಂಧಿಸಿದ್ದಾರೆ.
ನಗರದ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್ಬಿಆರ್ ಲೇಔಟ್ ಪೆಟ್ರೋಲ್ ಬಂಕ್ ಬಳಿಯ ಡಿಸೈನ್ಸ್ ಸ್ಪಾದಲ್ಲಿ ಹೊರರಾಜ್ಯದ ಹುಡುಗಿಯರನ್ನು ಕೆಲಸ ಕೊಡಿಸುವ ಆಮಿಷವೊಡ್ಡಿ ಕರೆಯಿಸಿ ತದನಂತರ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದರು. ಈ ಕುರಿತು ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಸತ್ತಾರ್ ಬೇಗ್ ಅಲಿಯಾಸ್ ತೇಜ್ ಎಂಬಾತನನ್ನು ಬಂಧಿಸಿದ್ದು, ಸ್ಪಾಗೆ ಬಂದಿದ್ದ ಸೈಯದ್ ಫಾರೂಕ್ ಅಲಿಯಾಸ್ ಸೈಯದ್ ಮೆಹಬೂಬ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಳಿ ಇದ್ದ ಎರಡು ಮೊಬೈಲ್ ಫೋನ್, ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಯುವತಿಯರನ್ನು ಹೊರರಾಜ್ಯಗಳಿಂದ ಕರೆ ತಂದು ಅವರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆಗೆ ದೂಡುತ್ತಿದ್ದ. ಇದರಿಂದ ಹೆಚ್ಚಿನ ಸಂಪಾದನೆ ಮಾಡಬಹುದು ಎಂದು ಆಮಿಷ ಒಡ್ಡುತ್ತಿದ್ದ. ಅಷ್ಟು ಮಾತ್ರವಲ್ಲದೇ, ಯುವತಿಯರ ಫೋಟೋಗಳನ್ನು ತೆಗೆದು ಪುರುಷರ ಮೊಬೈಲ್ಗಳಿಗೆ ಕಳುಹಿಸಿ ವೇಶ್ಯಾವಾಟಿಕೆಗಾಗಿ ಕರೆದು ಹಣ ಸಂಪಾದನೆ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಈ ಸಂಬಂಧ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.