ಬೆಂಗಳೂರು: ನಗರದ ಡಿ. ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್ಡಿಪಿಐ ಪಾತ್ರ ಬಹಳ ಪ್ರಮುಖವಾಗಿದ್ದು, ಸದ್ಯ ಎಸ್ಡಿಪಿಐ ಮುಖಂಡರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾಗಿ ಮುಜಾಮಿಲ್ ಹಾಗೂ ಫೈರೋಜ್ ಅವರನ್ನು ಹೆಚ್ವಿನ ವಿಚಾರಣೆಗೆ ಒಳಪಡಿಸಿದಾಗ ಸಾಕಷ್ಟು ಮಾಹಿತಿ ಬಯಲಾಗಿದೆ. ಹೀಗಾಗಿ ತಡರಾತ್ರಿ ಹೆಗ್ಗಡೆನಗರ ಬಳಿ ಇರುವ ಎಸ್ಡಿ ಪಿಐ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಾರಾಕಾಸ್ತ್ರಗಳ ಸಮೇತ 8 ಜನ ಸಿಕ್ಕಿದ್ದು, ಕಬ್ಬಿಣದ ರಾಡ್, ಬ್ಯಾಟ್ ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಈ 8 ಜನ ಆರೋಪಿಗಳು ಗಲಭೆ ನಡೆದ ರಾತ್ರಿ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಬಳಿ ಗಲಭೆ ಸೃಷ್ಟಿಸಿ ಬಳಿಕ ತಲೆಮರೆಸಿಕೊಂಡಿದ್ದರು. ಹಾಗೆ ಮತ್ತೆ ಪೊಲೀಸರು ತಮ್ಮನ್ನ ಬಂಧಿಸುತ್ತಾರೆ ಅನ್ನೋ ಖಚಿತ ಮಾಹಿತಿ ಮೇರೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬಚಾವ್ ಆಗುವ ಯೋಜನೆ ರೂಪಿಸಿಕೊಂಡಿದ್ದರು ಎನ್ನಲಾಗ್ತಿದೆ. ಆದರೆ ಸಿಸಿಬಿ ಪೊಲೀಸರ ತಂಡ ಇದ್ಯಾವುದಕ್ಕೂ ಅವಕಾಶ ಮಾಡಿಕೊಡದೇ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಎಸ್ಡಿಪಿಐ ಮುಖಂಡರಾದ ಮುಜಾಮಿಲ್ ಪಾಷಾ ಹಾಗೂ ಈತನ ಬೆಂಬಲಿಗರು ತಮ್ನ ಕಚೇರಿಯಲ್ಲಿ ಆಗಾಗ ಸಭೆ ನಡೆಸುತ್ತಿದ್ದರು. ಸದ್ಯ ಕಚೇರಿ ಬಳಿ ಇರುವ ಸಿಸಿಟಿವಿ ಹಾಗೆ ಕೆಲ ದಾಖಲಾತಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.