ಬೆಂಗಳೂರು: ಅಮಾಯಕ ಹುಡುಗಿಯರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ರೂಮ್ವೊಂದರಲ್ಲಿ ಹುಡುಗಿಯರನ್ನಿರಿಸಿ ಗಿರಾಕಿಗಳನ್ನ ಮೊಬೈಲ್ ಮೂಲಕ ಸಂಪರ್ಕಿಸುತ್ತಿದ್ದರು. ಗಿರಾಕಿಗಳು ಬಂದ ಬಳಿಕ ವೇಶ್ಯಾವಾಟಿಕೆ ನಡೆಸಿ ಅಕ್ರಮವಾಗಿ ಹಣವನ್ನು ಸಂಪಾದಿಸುತ್ತಿದ್ರು. ಈ ಕುರಿತಂತೆ ಮಾಹಿತಿ ಪಡೆದ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ತಂಡ ದಾಳಿ ನಡೆಸಿ ಜಯಮ್ಮ ಎಂಬ ಮಹಿಳೆಯನ್ನ ಬಂಧಿಸಿದ್ದಾರೆ. ಹಾಗೆ ಇತರೆ ಆರೋಪಿಗಳಾದ ಅನಿಲ್, ಕುಳ್ಳನಾಗ ದಾಳಿಯ ಸಂದರ್ಭದಲ್ಲಿಯೇ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿಗಳು ಸಂಘಟಿತ ರೀತಿಯಲ್ಲಿ ತಮ್ಮದೇ ಜಾಲವನ್ನು ನಿರ್ಮಿಸಿಕೊಂಡು ಅಮಾಯಕ ಹೆಣ್ಣು ಮಕ್ಕಳನ್ನು ಕರೆಸಿ ಅವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಗಿರಾಕಿಗಳಿಗೆ ಲೈಂಗಿಕ ತೃಷೆ ತೀರಿಸಿದ್ರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಹಣದ ಆಮಿಷವೊಡ್ಡುತ್ತಿದ್ದರು ಎನ್ನಲಾಗ್ತಿದೆ.
ಸದ್ಯ ಸಂತ್ರಸ್ತ ಯುವತಿಯರನ್ನು ಆರೋಪಿಗಳಿಂದ ರಕ್ಷಿಸಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.