ಬೆಂಗಳೂರು: ಜೂಜಾಟದಲ್ಲಿ ತೊಡಗಿದ್ದ ಕ್ಲಬ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ 17 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ನಗರದ ರೆಸಿಡೆನ್ಸಿ ರಸ್ತೆಯಲ್ಲಿ ನಡೆದಿದೆ.
ಉದಯ್ ಗೌಡ ಎಂಬಾತನ ಮಾಲೀಕತ್ವದಲ್ಲಿ ಕ್ಲಬ್ ನಡೆಯುತ್ತಿದ್ದು, ಇಲ್ಲಿ ಜೂಜಾಟ ನಡೆಯುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ 17 ಜನರ ಬಂಧನ ಮಾಡಿ 22 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ.
ಯಾರು ಈ ಉದಯ್ ಗೌಡ?
ಸಮಿಶ್ರ ಸರ್ಕಾರ ಇದ್ದಾಗ ಆಪರೇಷನ್ ಕಮಲದ ಕಿಂಗ್ ಪಿನ್ ಎಂದು ಉದಯ್ ಗೌಡ ಮೇಲೆ ಆರೋಪವಿತ್ತು. ನಂತ್ರ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿರುವ ಕಾರಣ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಉದಯ್ ಗೌಡ ಗೋವಾ ಮತ್ತು ಶ್ರೀಲಂಕಾದಲ್ಲಿ ಕೆಸಿನೋ ಟೇಬಲ್ ಹೊಂದಿದ್ದು, ನಗರದ ಕಬ್ಬನ್ ಪಾರ್ಕ್ ಬಳಿ ಇರುವ ಕ್ಲಬ್ ನಲ್ಲಿ ಅಕ್ರಮ ಜುಜಾಟ ನಡೆಸುತ್ತಿದ್ದ ಹೀಗಾಗಿ ಸಿಸಿಬಿ ದಾಳಿ ನಡೆಸಿದ್ದಾರೆ. ಇನ್ನು ಉದಯ್ ಗೌಡ ಮೇಲೆ ಪ್ರಾಣ ಬೆದರಿಕೆ, ಜೂಜಾಟದ ಪ್ರಕರಣ ಇತರೆ ಠಾಣೆಗಳಲ್ಲಿ ದಾಖಲಾಗಿದೆ. ಸಿಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಮುಂದುವರೆಸಿದ್ದಾರೆ.