ಬೆಂಗಳೂರು: ನಗರದಲ್ಲಿ ಮತ್ತೆ ಮೀಟರ್ ಬಡ್ಡಿ ವ್ಯವಹಾರದ ಸದ್ದು ಕೇಳಿ ಬಂದಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಸಿಲಿಕಾನ್ ಸಿಟಿಯಲ್ಲಿ ಕಾರ್ಯಾಚರಣೆ ನಡೆಸಿ ವಿವಿಪುರಂ ಬಳಿಯ ಬಾಬುಲಾಲ್ ಜೈನ್ ಎಂಬುವವರ ಮನೆ ಮತ್ತು ಕಚೇರಿ ಮೇಲೆ ಕಳೆದೆರಡು ದಿನಗಳ ಹಿಂದೆ ದಾಳಿ ನಡೆಸಿ ಮತ್ತೆ ನಿನ್ನೆ ರಾತ್ರಿ ಶೋಧ ಮುಂದುವರೆಸಿದ್ದಾರೆ.
ಈತ ಆಸ್ತಿ ಪತ್ರ ಇಟ್ಟು ಕೊಂಡು ನೂರಾರು ಕೋಟಿ ಹಣವನ್ನು ಶೇ 10, 20ರಷ್ಟು ಬಡ್ಡಿಗೆ ನೀಡುತ್ತಿದ್ದ. ಕಷ್ಟದಲ್ಲಿರುವ ಬಹಳಷ್ಟು ಮಂದಿ ಈತನಿಂದ ಸಾಲ ಪಡೆದು ಮೀಟರ್ ಬಡ್ಡಿಯಾದ ಕಾರಣ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಈತನ ಮೀಟರ್ ಬಡ್ಡಿ ವ್ಯವಹಾರದ ಕುರಿತು ಸಿಸಿಬಿಗೆ ದೂರು ಬಂದಿದ್ದು, ದೂರಿನ ಆಧಾರದ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇನ್ನು ದಾಳಿ ವೇಳೆ ಅಪಾರ ಪ್ರಮಾಣದ ಬ್ಲಾಂಕ್ ಚೆಕ್, ಆಸ್ತಿ ದಾಖಲೆ ಪತ್ರಗಳು ಸಿಕ್ಕಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.