ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯನ್ನು ಸಿಸಿಬಿ (ಕೇಂದ್ರ ಅಪರಾಧ ಪತ್ತೆ ದಳ) ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾನು ಬಿಜೆಪಿ ಮುಖಂಡ, ಸರ್ಕಾರದಲ್ಲಿ ಪ್ರಭಾವಿ ವ್ಯಕ್ತಿ ಎಂದು ಹೇಳಿಕೊಂಡು ಭವಾನಿ ರಾವ್ ಮೋರೆ ಎಂಬಾತ ಗೃಹ ಸಚಿವರ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಭವಾನಿ ರಾವ್ ಮೋರೆ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಹಿಂದೆ ತಿರುಗಾಡಿಕೊಂಡಿದ್ದ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿಸ್ತಾರಕ ಕೂಡ ಆಗಿದ್ದ. ಎಷ್ಟೋ ಮಂದಿಗೆ ಡ್ಯಾನ್ಸ್ ಬಾರ್‌ಗಳಿಗೆ ಲೈಸೆನ್ಸ್ ಕೊಡಿಸುತ್ತೇನೆ ಎಂದು ವಂಚಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ ಮೂಲದ ಉದ್ಯಮಿ ಸುರೇಶ್ ಎನ್ನುವವನಿಗೆ ಡ್ಯಾನ್ಸ್ ಬಾರ್ ಪರ್ಮೀಶನ್ ಕೊಡಿಸುತ್ತೇನೆ, ಈ ವಿಚಾರದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ಮಾತಾಡುತ್ತೇನೆ ಎಂದು ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದ. ಅಲ್ಲದೇ, ಸಚಿವರಿಗೆ ಹಣ ನೀಡಿ ಅನುಮತಿ ಕೊಡಿಸುತ್ತೇನೆ ಎಂದು ವಂಚಿಸಿ ಪರಾರಿಯಾಗಿದ್ದ ಎನ್ನಲಾಗಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್: ಆರೋಪಿ ಭವಾನಿ ರಾವ್ ಮೋರೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿ ಪತ್ತೆಗಾಗಿ ವಿಶೇಷ ಟೀಂ ಮಾಡಿದ್ದ ನಗರ ಪೊಲೀಸರು, ಶಿವಮೊಗ್ಗದಲ್ಲಿ ಆತನಿಗೆ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.