ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಇಂದು ಬೆಳ್ಳಗೆಯಿಂದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ಸತತ 8 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ, ತನಿಖೆ ಮುಗಿಸಿದ್ದಾರೆ.
ಸುದೀರ್ಘ 8 ಗಂಟೆಗಳಿಂದ ಅಲೋಕ್ ಕುಮಾರ್ ನಿವಾಸದಲ್ಲಿ ಸಿಬಿಐ ತನಿಖಾಧಿಕಾರಿಗಳು ಪರಿಶೀಲನೆ ಹಲವು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಹಾಗೂ ಅವರ ಎರಡು ಸಿಮ್ ವಶಪಡಿಸಿಕೊಂಡಿದ್ದಾರೆ. ಎರಡು ಕಾರಿನಲ್ಲಿ 11 ಮಂದಿ ತಂಡ ಪರಿಶೀಲನೆ ನಡೆಸಿ ಮನೆಯಿಂದ ಹೊರ ನಡೆದಿದ್ದಾರೆ.
ಅಲೋಕ್ ಕುಮಾರ್ ಮನೆ ಮಾತ್ರವಲ್ಲದೇ ನೃಪತುಂಗ ರಸ್ತೆಯಲ್ಲಿರುವ ಡಿಜಿ ಹಾಗೂ ಐಜಿಪಿ ಕಚೇರಿಯಲ್ಲಿ ಶೋಧ ಕಾರ್ಯ ಮುಗಿಸಿದ್ದಾರೆ. ಸಿಬಿಐ ಮೂಲಗಳ ಪ್ರಕಾರ ಆಡಿಯೋ ಲೀಕ್ ಮಾಡಲಾಗಿದ್ದ ಪೆನ್ ಡ್ರೈವ್ಗಾಗಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ.
ಆಡುಗೋಡಿ ಸಿಸಿಬಿ ಟೆಕ್ನಿಕಲ್ ಸೆಲ್ನಿಂದ ಆಡಿಯೋ ಕಾಪಿ ಮಾಡಿದ್ದ ಪೆನ್ ಡ್ರೈವ್ ಸಿಸಿಬಿ ಇನ್ಸ್ಪೆಕ್ಟರ್ ಮಿರ್ಜಾ ಅಲಿ ಆಡಿಯೋ ಕಾಪಿ ಮಾಡಿಕೊಂಡು, ಆಗ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಅವರಿಗೆ ಕೊಟ್ಟಿದ್ದರು. ಹೀಗಾಗಿ ನಿನ್ನೆ ಸಿಬಿಐ ಕೋರ್ಟ್ನಲ್ಲಿ ಸರ್ಚ್ ವಾರೆಂಟ್ ಪಡೆದು ಪ್ರಕರಣದ ತನಿಖಾಧಿಕಾರಿ ಸಿಬಿಐ ಎಸ್ಪಿ ಕಿರಣ್ ಕುಮಾರ್ ನೇತೃತ್ವದ ಮತ್ತೊಂದು ತಂಡ ಇಂದು ದಾಳಿ ಮಾಡಿತ್ತು.
ವಿಚಾರಣೆಗಾಗಿ ಅಲೋಕ್ ಕುಮಾರ್ ಪತ್ನಿಗೂ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಾಳೆ ಬೆಳಗ್ಗೆ ವಿಚಾರಣೆಗೆ ಹಾಜರ್ ಅಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ವೇಳೆ ಅಲೋಕ್ ಹಾಗೂ ಅವರ ಪತ್ನಿಯ ಅಕೌಂಟ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಿಬಿಐ ಅಧಿಕಾರಿಗಳು ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.