ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ 6 ಜನರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.
ಕಂದಾಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಕೊಡಿಸಲು 5 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ ಎನ್ನಲಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯ ನಿರ್ವಾಹಕ ಎಂಜಿನಿಯರ್ ಆಗಿದ್ದ ಪಿ.ಡಿ.ಕುಮಾರ್, ಐಎಂಎ ವ್ಯವಸ್ಥಾಪಕ ಮೊಹಮದ್ ಮನ್ಸೂರ್ ಖಾನ್, ನಿರ್ದೇಶಕರಾದ ನಿಜಾಮುದ್ದೀನ್ ಅಹ್ಮದ್, ವಾಸೀಂ, ನವೀದ್ ಆಹ್ಮದ್, ನಜಿರ್ ಹುಸೇಸ್ ಮತ್ತು ಐಎಂಎ ಕಂಪನಿ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಸಿಬಿಐ ಅಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, ಹಗರಣದಲ್ಲಿ ಪಿ.ಡಿ.ಕುಮಾರ್ ಪಾತ್ರದ ಬಗ್ಗೆ ಸ್ವವಿವರವಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಸಿಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಉತ್ತರ ವಿಭಾಗದ ಸಹಾಯಕ ಆಯುಕ್ತರಿಂದ ಕಂಪನಿಯು ಅವ್ಯವಹಾರ ನಡೆಸುತ್ತಿಲ್ಲ ಎಂಬ ವರದಿ ನೀಡಲು ಕಂದಾಯ ಇಲಾಖೆಯಿಂದ ಐಎಂಎ ಪರ ನಿರಾಪೇಕ್ಷಣಾ ಪತ್ರ ಕೊಡಿಸಲು ನಾಲ್ಕು ಕಂತುಗಳಲ್ಲಿ ಪಿ.ಡಿ.ಕುಮಾರ್ 5 ಕೋಟಿ ರೂ. ಲಂಚ ಪಡೆದಿದ್ದರು. ಆದರೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರಾಪೇಕ್ಷಣಾ ಪತ್ರ ನೀಡಲು ನಿರಾಕರಿಸಿದ್ದರು.
ಕಂದಾಯ ಇಲಾಖೆಯು ಕಂಪನಿ ಪರವಾಗಿ ನಿರಾಪೇಕ್ಷಣಾ ಪತ್ರ ನೀಡದಿದ್ದಾಗ ಲಂಚ ಪಡೆದ ಹಣ ಹಿಂತಿರುಗಿಸಲು ಪಿ.ಡಿ.ಕುಮಾರ್‌ಗೆ ಕಂಪನಿಯ ನಿರ್ದೇಶಕರು ಒತ್ತಾಯಿಸಿದ್ದರು. ಪಿ.ಡಿ.ಕುಮಾರ್ ಮತ್ತು ಐಎಂಎ ನಿರ್ದೇಶಕರ ನಡುವಿನ ವಾಟ್ಸಾಪ್ ಸಂದೇಶ ಸೇರಿ ಹಲವಾರು ಸಾಕ್ಷ್ಯಗಳನ್ನು ಸಿಬಿಐ ಕಲೆ ಹಾಕಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.