ಬೆಂಗಳೂರು : ಸಿಬಿಐ ದಾಳಿ ಮುಂದಿಟ್ಟುಕೊಂಡು ಉಪಚುನಾವಣೆ ಪ್ರಚಾರಕ್ಕೆ ಹೋಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಂತ್ರ, ಪ್ರತಿತಂತ್ರವೂ ಏನಿಲ್ಲ. ರಾಜ್ಯದ ಮತದಾರರು ನೋಡ್ತಿದ್ದಾರೆ. ಮೋದಿ, ಯಡಿಯೂರಪ್ಪ ಸರ್ಕಾರ ತೆಗೆಯೋ ಪ್ರಶ್ನೆಯೇನಿಲ್ಲ. ರಾಜ್ಯದ ಜನ ಸರ್ಕಾರವನ್ನ ನೋಡ್ತಿದ್ದಾರೆ. ಸರ್ಕಾರಕ್ಕೆ ಯಾವ ಮೆಸೇಜ್ ಹೋಗಬೇಕು, ಅದನ್ನ ಜನರೇ ಕೊಡ್ತಾರೆ ಎಂದರು.
ಎರಡು ಕ್ಷೇತ್ರಗಳ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರ ಮಾತನಾಡಿ, ನಾವೆಲ್ಲ ಒಟ್ಟಾಗಿ ಅಭ್ಯರ್ಥಿ ಸೂಚಿಸಿದ್ದೆವು. ಶಿರಾಗೆ ಟಿ ಬಿ ಜಯಚಂದ್ರ, ಆರ್ ಆರ್ ನಗರಕ್ಕೆ ಕುಸುಮಾ ಸೂಚಿಸಿದ್ದೆವು. ಹೈಕಮಾಂಡ್ ನಮ್ಮ ಶಿಫಾರಸನ್ನು ಒಪ್ಪಿ ಅಧಿಕೃತವಾಗಿ ಪ್ರಕಟಿಸಿದೆ. ಚುನಾವಣೆ ಸಿದ್ಧತೆ ಮಾಡಿಕೊಳ್ತೇವೆ. ಒಳ್ಳೆಯ ದಿನ ನೋಡಿ ನಾಮಿನೇಶನ್ ಮಾಡುತ್ತೇವೆ. ಸಿಬಿಐ ಮುಂದೆ ಇಟ್ಟುಕೊಂಡು ಮಾಡುವ ಚುನಾವಣೆ ಅಲ್ಲ ಇದು. ಇದರ ಬಗ್ಗೆ ಅಮೇಲೆ ಮಾತಾಡುತ್ತೇನೆ ಎಂದರು.
ಉಪಚುನಾವಣೆಗೆ ಕೈ ಅಭ್ಯರ್ಥಿಗಳ ಘೋಷಣೆ ವಿಚಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಕುಸುಮಾ ಬಹಳ ಉತ್ತಮ ಅಭ್ಯರ್ಥಿಯಾಗಿದ್ದಾರೆ. ವೆಲ್ ಎಜುಕೇಟೆಡ್ ಇದ್ದಾರೆ. ಜಯಚಂದ್ರ ಕೂಡ ಪ್ರಬಲ ಸ್ಪರ್ಧಿ. ಡಿಕೆಶಿ ಮೇಲೆ ಸಿಬಿಐ ದಾಳಿಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಬಿಜೆಪಿ, ಜೆಡಿಎಸ್ ಈವರೆಗೂ ಕ್ಯಾಂಡಿಡೇಟ್ ಹಾಕಿಲ್ಲ.
ಶಿರಾದಲ್ಲೂ ಅವರಿಗೆ ಅಭ್ಯರ್ಥಿಗಳು ಸಿಕ್ಕಿಲ್ಲ. ಡಿಕೆಶಿ ಅವರ ಸಿಬಿಐ ವಿಚಾರವನ್ನೇ ಜನರ ಮುಂದೆ ಇಡ್ತೇವೆ. ಸರ್ಕಾರದ ಭ್ರಷ್ಟಾಚಾರವನ್ನ ಜನರಿಗೆ ತಿಳಿಸ್ತೇವೆ. ನಾವು ಎರಡೂ ಕ್ಷೇತ್ರಗಳಲ್ಲೂ ಗೆದ್ದು ಬರ್ತೇವೆ. ಆರ್‌ಆರ್‌ನಗರದಲ್ಲಿ ಅಚ್ಚರಿಯ ಫಲಿತಾಂಶ ಬರುತ್ತೆ ಕಾದು ನೋಡಿ ಎಂದರು.