ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ಕರ್ನಾಟಕ ಮತ್ತೊಂದು ಅಫಿಡವಿಟ್ ಸಲ್ಲಿಕೆ ಮಾಡಿದೆ. ಸೆಪ್ಟೆಂಬರ್ 12 ರ ನಂತರ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ನಿತ್ಯ 24 ಸಾವಿರ ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿಸಬೇಕು ಎಂದು ತಮಿಳುನಾಡು ಸರ್ಕಾರ ಕೋರ್ಟ್ ಮುಂದೆ ವಾದ ಮಂಡಿಸಿದೆ. ಆದರೆ, ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆ ಕಾರಣ ಅಷ್ಟು ಪ್ರಮಾಣದ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದಿಸುತ್ತಿದೆ.
ಸುಪ್ರೀಂಗೆ ಕರ್ನಾಟಕ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಏನಿದೆ?: ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುತ್ತಿದ್ದು, ಜಲಾಶಯಗಳಿಂದ ಇನ್ನು ಮುಂದೆ ಯಾವುದೇ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಡ್ ಸಲ್ಲಿಸಿದೆ. ಸೆಪ್ಟೆಂಬರ್ 12 ರ ನಂತರ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್‌ಗೆ ಸ್ಪಷ್ಟವಾಗಿ ತಿಳಿಸಿದೆ. ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮರು ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಸಮಸ್ಯೆಗಳಿಗೆ ತಮಿಳುನಾಡು ರಾಜ್ಯವೇ ಕಾರಣ ಎಂದು ಕರ್ನಾಟಕ ಸುಪ್ರೀಂಕೋರ್ಟ್ನಲ್ಲಿ ಪ್ರತಿಪಾದಿಸಿದೆ.
ಕರ್ನಾಟಕ ರಾಜ್ಯವು ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳೆರಡರಲ್ಲೂ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗಿದೆ ಎಂದು ಸುಪ್ರೀಂಕೋರ್ಟ್ಗೆ ಮಾಡಿರುವ ಮನವಿಯಲ್ಲಿ ಅರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. “ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಸ್ತುತ 04.09.2023 ರಂದು 56.043 ಟಿಎಂಸಿ ನೀರು ಸಂಗ್ರಹವಿದೆ. ನಿರೀಕ್ಷಿತ ಒಳಹರಿವು ಸುಮಾರು 40 ಟಿಎಂಸಿ ಇದೆ. ಕರ್ನಾಟಕದ ಅವಶ್ಯಕತೆಯು CWMA (ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ) ಮುಂದೆ ಸಲ್ಲಿಸಿದಂತೆ 140 TMC ಆಗಿದೆ. ಆದ್ದರಿಂದ, 12.09.2023ರ ನಂತರ ಕರ್ನಾಟಕದ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವುದು ಕಾರ್ಯಸಾಧ್ಯವಾಗುವುದಿಲ್ಲ ಎಂದು ನಾನು ಮನನಿ ಸಲ್ಲಿಸುತ್ತೇನೆ ಎಂದು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. 29.08.2023 ರಂದು ನಡೆದ CWMA ಸಭೆಯ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಲಾಗಿದೆ ಎಂದು ಕರ್ನಾಟಕ ತಾನು ಸಲ್ಲಿಸಿರುವ ಅರ್ಜಿಯಲ್ಲಿ ಸ್ಪಷ್ಟಪಡಿಸಿದೆ.
ಸಾಮಾನ್ಯ ಮಳೆ ವರ್ಷಕ್ಕೆ ನಿಗದಿಪಡಿಸಿದ ನೀರು ಬಿಡುಗಡೆಯ ಪ್ರಕಾರ, ಜೂನ್ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್ನಲ್ಲಿ 36.76 ಟಿಎಂಸಿ, ಅಕ್ಟೋಬರ್ನಲ್ಲಿ 20.22 ಟಿಎಂಸಿ, ನವೆಂಬರ್ನಲ್ಲಿ 13.78 ಟಿಎಂಸಿ, ಡಿಸೆಂಬರ್ನಲ್ಲಿ 7.35 ಟಿಎಂಸಿ, ಜನವರಿಯಲ್ಲಿ 2.76 ಟಿಎಂಸಿ ಹಾಗೂ ಫೆಬ್ರವರಿಯಲ್ಲಿ 2.5 ಟಿಎಂಸಿ ಸೇರಿ ಮೇ ತಿಂಗಳವರೆಗೆ ಒಟ್ಟು 177.25 ಟಿಎಂಸಿ ನೀರನ್ನು ಬಿಡುಗಡೆ ಮಾಡುವ ಬಾಧ್ಯತೆ ಹೊಂದಿಲ್ಲ. ಇದಕ್ಕಾಗಿ ತಮಿಳುನಾಡು ಹೆಚ್ಚಿನ ನೀಡು ಬಿಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸರ್ಕಾರ ವಿವರಿಸಿದೆ. ನೀರು ಹರಿವಿನ ಕೊರತೆಗೆ ಅನ್ವಯಿಸಿದರೆ, ಕರ್ನಾಟಕದ ಕನಿಷ್ಠ ಬೆಳೆ ನೀರಿನ ಅವಶ್ಯಕತೆ ಸುಮಾರು 140 ಟಿಎಂಸಿ ಆಗಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಜಲಾಶಯಗಳ ಸಂಗ್ರಹ ಮತ್ತು ಒಳಹರಿವನ್ನು ಗಮನಕ್ಕೆ ತೆಗೆದುಕೊಂಡಲ್ಲಿ, ಕರ್ನಾಟಕದ ಬೆಳೆಗಳಿಗೆ ಮತ್ತು ಬೆಂಗಳೂರು ನಗರ ಸೇರಿದಂತೆ ಇತರ ಪಟ್ಟಣಗಳು ಮತ್ತು ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸಲು ಈಗಿರುವ ನೀರಿನ ಸಂಗ್ರಹ ಸಾಕಾಗದು ಎಂದು ಹೇಳಿದೆ.
ತಮಿಳುನಾಡು ಅರ್ಜಿ ವಜಾ ಮಾಡುವಂತೆ ಕರ್ನಾಟಕದ ಮನವಿ: ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ಕೊರತೆಯನ್ನು ಸಂಪೂರ್ಣವಾಗಿ ಆಧರಿಸಿ CWMA ಯಿಂದ 8.988 TMC ಕೊರತೆ ಲೆಕ್ಕಾಚಾರ ಮಾಡಲಾಗಿದೆ. ಆದರೆ ಇದು ಸರಿಯಲ್ಲಿ ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ತಾನು ಸಲ್ಲಿಸಿರುವ ಮನವಿಯಲ್ಲಿ ಮನವರಿಕೆ ಮಾಡಿಕೊಟ್ಟಿದೆ. ಪ್ರತಿದಿನ 24,000 ಕ್ಯೂಸೆಕ್ ನೀರು ಹರಿಸಬೇಕೆಂಬ ತಮಿಳುನಾಡು ಬೇಡಿಕೆ ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ ಮತ್ತು 2023 ರ ಈ ಜಲವರ್ಷ ಎಂಬ ಸಂಪೂರ್ಣ ತಪ್ಪು ಊಹೆಯ ಆಧಾರದ ಮೇಲೆ ತಮಿಳುನಾಡು ವಾದ ಮಾಡುತ್ತಿದೆ. ಹಾಗಾಗಿ ತಮಿಳುನಾಡಿನ ಈ ಅರ್ಜಿಯನ್ನು ವಜಾಗೊಳಿಸುವಂತೆ ಕರ್ನಾಟಕವು ಮರು ಪರಿಶೀಲನಾ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ. ಇದೇ ವೇಳೆ, ಬಿಳಿಗುಂಡ್ಲುವಿನ ಅಂತಾರಾಜ್ಯ ಗಡಿಯಲ್ಲಿ ಮೇಕೆದಾಟು ಸಮತೋಲನ ಜಲಾಶಯ - ಕುಡಿಯುವ ನೀರಿನ ಯೋಜನೆ ನಿರ್ಮಾಣಕ್ಕೆ ತಮಿಳುನಾಡು ಅನಗತ್ಯ ವಿರೋಧ ಉಂಟು ಮಾಡುತ್ತಿದೆ ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ: ಕಾವೇರಿ ನೀರು ಹರಿಸಲು ನಿರ್ದೇಶನ ನೀಡುವಂತೆ ಕೋರಿದ್ದ ತಮಿಳುನಾಡು ಮನವಿಗೆ ಯಾವುದೇ ಆದೇಶ ನೀಡಲು ನಿರಾಕರಿಸಿದ ಸುಪ್ರೀಂ