ಬೆಂಗಳೂರು: ಕಾವೇರಿ ನದಿ ನೀರು ವಿವಾದ ಕುರಿತು ಚರ್ಚಿಸಲು ಇಂದು(ಬುಧವಾರ) ಬೆಂಗಳೂರಿನ ವಿಧಾನಸೌಧದಲ್ಲಿ ಕರೆದಿದ್ದ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಹೆಚ್‌ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಮಳೆ ಕೊರತೆ ಇದ್ದರೂ ತನಗೆ ಬಾಕಿ ಇರುವ ನೀರನ್ನು ಬಿಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ರೈತರ ಮತ್ತು ತಮಿಳುನಾಡಿಗೆ ಬಿಡಬೇಕಾದ ನೀರಿನ ಬಗ್ಗೆ ಚರ್ಚೆ ನಡೆಸಲು ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡು ತನ್ನ ಪಾಲಿನ ನೀರನ್ನು ಕರ್ನಾಟಕದಿಂದ ಹರಿಸಲು ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಿದೆ. ಇದನ್ನು ಮನ್ನಿಸಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠ ವಿಚಾರಣೆಗೆ ಹೊಸ ಪೀಠ ರಚಿಸುವುದಾಗಿ ಹೇಳಿದೆ.
ಸಭೆ ವೇಳೆ ಮಾಹಿತಿ ಹಂಚಿಕೊಂಡ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್ ವೈಫಲ್ಯದಿಂದಾಗಿ 2023-24ರ ಜಲ ವರ್ಷವು ಸಂಕಷ್ಟದ ವರ್ಷವಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಸಭೆಯಲ್ಲಿ ಜೂನ್ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್ 10ರಂದು 1,5000 ಕ್ಯೂಸೆಕ್ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ ಪ್ರಮಾಣ 10,000 ಕ್ಯೂಸೆಕ್‌ಗೆ ಇಳಿಕೆ ಮಾಡಿದೆ. ಇದರಿಂದ ಅಸಮಾಧಾನಗೊಂಡ ತಮಿಳುನಾಡು ಸುಪ್ರೀಂ ಕೋರ್ಟ್ನಲ್ಲಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶುಕ್ರವಾರ ಮೂರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಎಂದು ಸಭೆಗೆ ತಿಳಿಸಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ನೀರಾವರಿ ವಿಷಯದಲ್ಲಿ ರಾಜ್ಯದ ಹಿತ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿರು. ಸರ್ಕಾರದ ಕಾನೂನು ಹೋರಾಟ ಮುಂದುವರೆಯಲಿದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಮುಖಂಡರ ಸಹಕಾರ ಕೋರಿದರು. ಬಳಿಕ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಸಂಸದ ಡಿ ವಿ ಸದಾನಂದ ಗೌಡ, ವೀರಪ್ಪ ಮೊಯಿಲಿ, ಸಂಸದರಾದ ಸುಮಲತಾ, ಜಗ್ಗೇಶ್, ಡಾ. ಹನುಮಂತಯ್ಯ, ಮುನಿಸ್ವಾಮಿ, ಜಿ ಎಂ ಸಿದ್ದೇಶ್ವರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೊದಲಾದವರು ರಾಜ್ಯದ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸಂಕಷ್ಟ ಹಂಚಿಕೆ ಸೂತ್ರವನ್ನು ಇನ್ನಷ್ಟು ನಿರ್ದಿಷ್ಟಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ನಾಡಿನ ಹಿತ ಕಾಯುವ ತೀರ್ಮಾನಕ್ಕೆ ಬೆಂಬಲ ಎಂದ ಹೆಚ್ಡಿಕೆ: ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆಗೆ ಹಾಜರಾಗುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು, ಕಾವೇರಿ ಮತ್ತು ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ನಾಡಿನ ಜನರ ಹಿತರಕ್ಷಣೆಗಾಗಿ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.
ಮೂರ್ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿತ್ತು. ಅದನ್ನು ಬಳಸಿಕೊಳ್ಳದೆ ರಾಜ್ಯ ಸರ್ಕಾರಮ ಮೈಮರೆತು ಕುಂತಿತ್ತು. ಈಗ ಮಳೆ ಕಡಿಮೆಯಾಗಿದ್ದು, ಜಲಾಶಯಗಳಲ್ಲಿ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸಂಕಷ್ಟದ ದಿನಗಳು ಎದುರಾಗುತ್ತಿವೆ. ಮುಂದೇನು ಮಾಡಬೇಕು ಎಂಬ ವಿಚಾರದ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಅದು ವಿರೋಧ ಪಕ್ಷದವರು ಒತ್ತಾಯ ಮಾಡಿದ ಮೇಲೆ ಸರ್ವ ಪಕ್ಷ ಸಭೆ ಕರೆಯಲಾಗಿದೆ. ಅತ್ತೂ, ಕರೆದು ಸಭೆ ನಡೆಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರೇ ತಿರಸ್ಕರಿಸಿದ ಜನತಾ ಜಲಧಾರೆ: ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಜೆಡಿಎಸ್ನ 'ಜನತಾ ಜಲಧಾರೆ' ಬೇಡ ಎಂದು ನಾಡಿನ ಜನರು ತಿರಸ್ಕರಿಸಿದ್ದಾರೆ. ಜನರಿಗೆ ಬೇಡವೆಂದ ಮೇಲೆ ನಾವೇನು ಮಾಡುವುದು. ಈ ಸರ್ಕಾರ ನಮ್ಮ ಮಾತು ಕೇಳುವುದಿಲ್ಲ. ಅಲ್ಲಿರುವವರು ನಮಗಿಂತ ಬುದ್ದಿವಂತರು ಎಂದು ಕಿಚಾಯಿಸಿದರು.
ಕಾವೇರಿ ವಿವಾದ ಕೋರ್ಟ್ಗೆ ಹೋಗಿದೆ. ನಮ್ಮ ಸಂಕಷ್ಟ ಪರಿಸ್ಥಿತಿ ಮನವರಿಕೆ ಮಾಡಿ ಅಂತಾ ಹೇಳಿದ್ದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ತಮಿಳುನಾಡಿನ ರೈತರ ರಕ್ಷಣೆಗೆ ಅಲ್ಲಿನ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ಅದೇ ಪ್ರಯತ್ನ ನಮ್ಮಲ್ಲಿ ಮಾಡಬೇಕಿದೆ. ಯಾವ ಹಂತದಲ್ಲಿ ಸರಿಪಡಿಸಬೇಕು ಎಂಬ ವಿವೇಚನೆ ಮುಖ್ಯ ಎಂದರು.
ರೈತರ ಬದುಕಿನ ಗ್ಯಾರಂಟಿ ನೀಡಿ: ಬರಪೀಡಿತ ಪ್ರದೇಶಗಳ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, 124 ತಾಲೂಕುಗಳು ಬರಗಾಲ ಪೀಡಿತ ಎಂದು ಕಂದಾಯ ಸಚಿವರ ಹೇಳಿದ್ದಾರೆ. ಮುಂದಿನವಾರದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಕೊಟ್ಟ ಗ್ಯಾರಂಟಿ ಸ್ಕೀಮ್ಗಳ ಬಗ್ಗೆ ಪ್ರಚಾರ ಮಾಡಿಕೊಂಡೇ ಸರ್ಕಾರ ಕಾಲ ಕಳೆಯುತ್ತಿದೆ. ನಾಡಿನ ಜನರ ಜೀವದ ಗ್ಯಾರಂಟಿ, ರೈತರ ಬದುಕಿನ ಗ್ಯಾರಂಟಿ ಬಗ್ಗೆ ಹೆಚ್ಚಿನ ಗಮನ ಕೊಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ನಮಗೆ ಒಟ್ಟು 124 ಟಿಎಂಸಿ ನೀರು ಬೇಕು; ಈಗ ಇರುವುದು 55 ಟಿಎಂಸಿ ಮಾತ್ರ: ಡಿ.ಕೆ.ಶಿವಕುಮಾರ್