ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ರೈತರ ನಿಯೋಗ ಗುರುವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅರನ್ನು ಭೇಟಿಯಾಗಿ, ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ, ರಾಜ್ಯದ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿತು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ಅವರ ನೇತೃತ್ವದ ರೈತ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಒಳ ಹರಿವು ಕಡಿಮೆ ಇದೆ. ಕುಡಿಯುವ ನೀರಿಗೆ ಕೊರತೆ ಇದೆ. ತಮಿಳುನಾಡಿಗೆ ನೀರು ಹರಿಸಿದರೆ ಸಮಸ್ಯೆ ಆಗಲಿದೆ. ಬೆಳೆಯುತ್ತಿರುವ ಫಸಲು ಉಳಿಸಲು ಕಷ್ಟ ಆಗುತ್ತದೆ. ಕಾವೇರಿ ನದಿಯಲ್ಲಿ ನೀರು ಕಡಿಮೆ ಇದ್ದು, ಕುಡಿಯುವ ನೀರಿಗೂ ಸಾಕಷ್ಟು ಕಷ್ಟ ಆಗುತ್ತಿದೆ. ಕಾವೇರಿ ನದಿ ನೀರನ್ನು ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದೇವೆ. ತಮಿಳುನಾಡಿಗೆ ನೀರು ಹರಿಸಿದರೆ ಕುಡಿಯಲು ನೀರಿಲ್ಲದೇ ಪರದಾಟ ನಡೆಸಬೇಕಾಗುತ್ತದೆ ಎಂದರು.
ಸೆ.11ರವರೆಗೆ 5000 ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ಸರ್ಕಾರ ಹೇಳಿದೆ. ಕಾವೇರಿ ವಿವಾದದ ಕುರಿತಾಗಿ ಸಂಕಷ್ಟ ಸೂತ್ರವನ್ನು ಸರಿಯಾಗಿ ಜಾರಿಗೆ ತರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ದೊಡ್ಡಣ್ಣನ ಪಾತ್ರವನ್ನು ಕೇಂದ್ರ ಸರ್ಕಾರ ಮಾಡಬೇಕು. ಎರಡು ರಾಜ್ಯಗಳನ್ನು ಕರೆದು ಸಂಕಷ್ಟ ಸೂತ್ರವನ್ನು ಕೇಂದ್ರ ಮಾಡಬೇಕು ಎಂದು ನಾಗೇಂದ್ರ ಆಗ್ರಹಿಸಿದರು.
ಸೆ.11ಕ್ಕೆ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್ : ರೈತರ ಹಿತದೃಷ್ಟಿಯಿಂದ ಕೂಡಲೇ ನೀರು ಬಿಡುವುದು ನಿಲ್ಲಿಸಿ. ಈಗಾಗಲೇ ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಸೆ. 11 ನೇ ತಾರೀಖು ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಜನ ಜಾನುವಾರುಗಳ ಜೊತೆಗೆ ಬೃಹತ್ ಪ್ರತಿಭಟನೆಗೆ ಇಳಿಯುತ್ತೇವೆ. ಈಗಾಗಲೇ ಅಹೋರಾತ್ರಿ ಧರಣಿ ಮಾಡ್ತಿದ್ದೇವೆ. ನಾಳೆಯಿಂದ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ಶುರುಮಾಡುತ್ತೇವೆ. ಸೆ.11 ರಂದು ಬೃಹತ್ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದರು.
ಯಾವುದೇ ಸರ್ಕಾರ ಬಂದರು ರೈತರನ್ನು ರಕ್ಷಣೆ ಮಾಡುವುದಿಲ್ಲ. ವಿರೋಧ ಪಕ್ಷ ಹಾಗೂ ಆಡಳಿತದಲ್ಲಿದ್ದಾಗ ಒಂದೊಂದು ರೀತಿ ಅಭಿಪ್ರಾಯ ಹೇಳುತ್ತಾರೆ. ಬ್ರಿಟಿಷರ ಮದ್ರಾಸ್, ಮೈಸೂರು ಸರ್ಕಾರದಿಂದಲೂ ಬಹಳ ಅನ್ಯಾಯವಾಗಿದೆ. ತಮಿಳುನಾಡಿನಲ್ಲಿ ಮುಂದಿನ ತಿಂಗಳು ಉತ್ತಮ ಮಳೆಯಾಗುವ ಸೂಚನೆಯಿದೆ. ಮೆಟ್ಟೂರು ಡ್ಯಾಮ್ನಲ್ಲಿ ಅನುಕೂಲಕರ ನೀರಿದೆ. ಇದೇ ರೀತಿ ನಾವು ನೀರು ಬಿಟ್ಟರೆ ಟ್ಯಾಂಕರ್ಗಳ ಮೂಲಕ ನೀರು ತುಂಬಿಸಬೇಕಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಕಾವೇರಿ ಸಂಕಷ್ಟದ ಬಗ್ಗೆ ಮಾಹಿತಿ ಗೊತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಯಿಯನ್ನು ಸರಿಯಾಗಿ ಉಪಯೋಗಿಸಬೇಕು : ರೈತರ ಆತ್ಮಹತ್ಯೆ ಬಗ್ಗೆ ಶಾಸಕರ, ಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿದ ನಾಗೇಂದ್ರ, ರೈತರ ಬಗ್ಗೆ ಲಘುವಾಗಿ ಯಾರೇ ಹೇಳಿಕೆ ಕೊಟ್ಟಿರುವುದು ತಪ್ಪು. ಸಚಿವ ಶಿವಾನಂದ ಪಾಟೀಲ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಲಘುವಾಗಿ ಮಾತಾಡಿದ್ದಾರೆ. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ಕೊಡುತ್ತೇವೆ. ಅವರ ಬಾಯನ್ನು ಸರಿಯಾಗಿ ಉಪಯೋಗಿಸಬೇಕು ಎಂದು ಎಚ್ವರಿಕೆ ನೀಡಿದರು.
5 ಲಕ್ಷ ಕೊಡುತ್ತೇವೆ ಎಂದರೆ ಪ್ರಾಣಕ್ಕಿಂತ ಹಣ ಮುಖ್ಯಾನಾ..?. ಅವಿವೇಕತನದ ಹೇಳಿಕೆಗಳು ರೈತರ ಕುಟುಂಬದ ಮೇಲೆ ಕೊಡಬಾರದು. ಶಿವಾನಂದ ಪಾಟೀಲ್ ಹಾಗೂ ಡಿಸಿಎಂ ರೈತರನ್ನು ಎದುರುಹಾಕಿಕೊಳ್ಳಬೇಡಿ. ಜನ ವಿರೋಧಿ ಬಿಜೆಪಿ ಸರ್ಕಾರವನ್ನು ನಾವು ಸೋಲಿಸಿದ್ದೇವೆ. ನಿಮ್ಮ ನಡೆ ಗಮನಿಸುತ್ತಿರುತ್ತೇವೆ. ನೀವು ತಪ್ಪು ಮಾಡಿದರೆ ನಿಮ್ಮನ್ನು ಸೋಲಿಸುತ್ತೇವೆ ಎಂದರು.