ಬೆಂಗಳೂರು: ಜಾತಿ ಪದ್ಧತಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಜಾತಿ ಹೆಸರಿನಲ್ಲಿ ದಬ್ಬಾಳಿಕೆ ಮತ್ತು ಶೋಷಣೆಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಧರ್ಮದ ಹೆಸರಿನ ಚೌಕಟ್ಟು. ಹೀಗಾಗಿ ಹಿಂದುಳಿದ ವರ್ಗಗಳ ಸಮುದಾಯಗಳು ತ್ರಿಶಂಕು ಸ್ಥಿತಿಯಲ್ಲಿವೆ ಎಂದು ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ಮಟ್ಟದ ಮುಖಂಡರ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅವಕಾಶ ಸಿಗಬೇಕು. ಸಂವಿಧಾನ ಬಹುಸಂಖ್ಯಾತರಿಗೆ ಮೀಸಲು ಅಲ್ಲ. ಎಲ್ಲಾ ವರ್ಗದ ಜನರಿಗೂ ಸಂವಿಧಾನದಲ್ಲಿ ಅವಕಾಶವಿದೆ. ಈ ಅವಕಾಶ ಮತ್ತು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದ್ರು.
ನೀವು ಯಾವ ಪಕ್ಷ ಅಂತ ನೋಡಬೇಡಿ. ನಿಮಗೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಮತ ಹಾಕಿ. ಜನಪ್ರತಿನಿಧಿಗಳಿಗೆ ನಮ್ಮ ಶಕ್ತಿ ಏನು ಎಂಬುದು ಗೊತ್ತಾಗುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿಗೆ ರಾಜಕೀಯ ಮೀಸಲಾತಿ ಇದೆ. ಆದ್ರೆ ಹಿಂದುಳಿದ ವರ್ಗಕ್ಕೆ ರಾಜಕೀಯ ಮೀಸಲಾತಿ ಇಲ್ಲ. ಹಾಗೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಿದ್ದಾರೆ. ಆದ್ರೆ ಹಿಂದುಳಿದ ವರ್ಗಕ್ಕೆ ನೀಡಿದ್ದ ಮೀಸಲಾತಿಯನ್ನು ತೆಗೆದು ಹಾಕಿದ್ದಾರೆ. ಹೀಗಾಗಿ ಹಿಂದುಳಿದ ವರ್ಗಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ರು.
ಸಂವಿಧಾನದಲ್ಲಿರುವ ನಮ್ಮ ಹಕ್ಕು ಮತ್ತು ಅವಕಾಶಗಳನ್ನು ಪಡೆದುಕೊಳ್ಳಲು ನಾವು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸುಧಾರಣೆಯಾಗಬೇಕು. ಅಖಿಲ ಕರ್ನಾಟಕ ಹೆಳವ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಬಗೆಹರಿಸಲು ವಿಧಾನಪರಿಷತ್ ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಅಲ್ಲದೆ ಹೆಳವ ಸಮಾಜ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಯವರ ಜೊತೆಗೂ ಚರ್ಚೆ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ರು.
ಇದಕ್ಕೂ ಮುನ್ನ ಮಾತನಾಡಿದ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯಾಧ್ಯಕ್ಷರಾದ ಎಮ್. ನಾಗರಾಜ್, ಹೆಳವ ಸಮುದಾಯ ಅಕ್ಷರ ಜ್ಞಾನವಿಲ್ಲದಿದ್ದರೂ ಮೌಖಿಕವಾಗಿಯೇ ತಮ್ಮ ವಿಶಿಷ್ಟ ಕಲಾ ನೈಪುಣ್ಯತೆಯಿಂದ 500 ರಿಂದ 600 ವರ್ಷದ ವಂಶಾವಳಿ ಹೇಳುತ್ತದೆ.
ಹೆಳವರು ಉಳಿದವರ ಕುಲದ ಕಥೆ ಹೇಳಿದರು. ಇತಿಹಾಸ ಕಟ್ಟಿಕೊಟ್ಟರು, ಆದರೆ ತಮ್ಮ ಇತಿಹಾಸವನ್ನು ಬರೆದಿಡಲಿಲ್ಲ. ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಲಿಲ್ಲ. ಹೀಗಾಗಿ ಸರ್ಕಾರದ ಯಾವುದೇ ಸೌಲಭ್ಯಗಳು ಹೆಳವ ಸಮುದಾಯಕ್ಕೆ ಸಿಗುತ್ತಿಲ್ಲ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯವಾಗಿಯೂ ಹೆಳವ ಸಮಾಜ ತುಂಬಾ ಹಿನ್ನಡೆಯಲ್ಲಿದೆ. ಹೀಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಹೆಳವ ಸಮಾಜದ ಅಭಿವೃದ್ದಿಗೆ ಸ್ಪಂದಿಸಬೇಕು ಮತ್ತು ಸಮುದಾಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು: ಹೆಚ್ಡಿಕೆ ಒತ್ತಾಯ
ಹೆಳವರು ಮೂಲತಃ ಅಲೆಮಾರಿಗಳು, ಇವರಿಗೆ ಸುಲಭವಾಗಿ ಜಾತಿ ಪ್ರಮಾಣಪತ್ರ ಸಿಗುವುದಿಲ್ಲ. ಇವರು ಶೈಕ್ಷಣಿಕವಾಗಿ ಕೇವಲ ಶೇ.2ರಷ್ಟು ಮಾತ್ರ ಮುಂದುವರೆದಿದ್ದಾರೆ. ಇವರಲ್ಲಿ ಬಹುತೇಕರಿಗೆ ಮತದಾರರ ಗುರುತಿನ ಚೀಟಿ ಇಲ್ಲ, ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ನಂತಹ ಗುರುತೂ ಸಹ ಇಲ್ಲ. ಸಂಘಟನಾತ್ಮಕವಾಗಿ, ರಾಜಕೀಯವಾಗಿ ಗುರುತಿಸಿಕೊಂಡಿಲ್ಲ ಎಂದು ತಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಮ್. ನಾಗರಾಜ್ ಮಾಹಿತಿ ನೀಡಿದರು.
ಪ್ರವರ್ಗ-1ರಲ್ಲಿ ಸೇರಿಸಲಾದ ಹೆಳವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರ ಹಂಪಿ ವಿಶ್ವವಿದ್ಯಾನಿಲಯಕ್ಕೆ ಸೂಚನೆ ನೀಡಿತ್ತು. ಆದರೆ ಕುಲಶಾಸ್ತ್ರೀಯ ಅಧ್ಯಯನ ಮುಗಿದು ಕರ್ನಾಟಕದ ಹೆಳವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬಹುದು ಎಂದು ವರದಿ ಬಂದು ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಅಧ್ಯಯನ ಸಂಸ್ಥೆ ಮೈಸೂರು ಇವರು ಶಿಫಾರಸು ಮಾಡಿದೆ. ನಾಲ್ಕು ವರ್ಷ ಕಳೆದರೂ ಸರ್ಕಾರ ಮಾತ್ರ ಹೇಳುವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿಲ್ಲ.
ನಾಲ್ಕು ವರ್ಷಗಳಿಂದ ಈ ಕಡತವು ಸಮಾಜ ಕಲ್ಯಾಣ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದೆ. ಹೆಳವ ಸಮುದಾಯದ ಜನರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು, ಅವರನ್ನೂ ಉಳಿದ ಸಮುದಾಯದವರಂತೆ ಪರಿಗಣಿಸಬೇಕು ಅನ್ನುವುದು ಈ ಸಮುದಾಯದ ಬಹುಕಾಲದ ಬೇಡಿಕೆಯಾಗಿದೆ ಎಂದರು.
ಸರ್ಕಾರಿ ದಾಖಲಾತಿಗಳು, ಪ್ರಮಾಣ ಪತ್ರ, ಗುರುತಿನ ಚೀಟಿ ಮತ್ತು ಹಕ್ಕುಪತ್ರಗಳನ್ನು ನೀಡಬೇಕು. ಹೆಳವರ ಮಕ್ಕಳಿಗೆ ಶಿಕ್ಷಣ ಲಭಿಸಬೇಕು ತನ್ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಈ ಸಮುದಾಯವನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ. ಹಾಗೆಯೇ ಈ ಸಮಾಜಕ್ಕೆ ಸೂಕ್ತ ಮೀಸಲಾತಿ ಒದಗಿಸಿ ಆರ್ಥಿಕ ಪ್ರಗತಿಯ ಆಯಾಮವನ್ನೂ ಸರ್ಕಾರ ತುರ್ತಾಗಿ ಪರಿಗಣಿಸಬೇಕಿದೆ ಎಂದು ಎಮ್. ನಾಗರಾಜ್ ಒತ್ತಾಯಿಸಿದ್ದಾರೆ.