ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸರಸ್ವತಿ, ಬುದ್ಧನ ವಿಗ್ರಹ ಪ್ರತಿಷ್ಟಾಪನೆ ವಿಚಾರ ವಿವಾದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಬ್ ಕಮಿಟಿ ರಚನೆಯ ನಂತರ ವಿವಾದ ಮುಗಿತ್ತು ಎನ್ನುವಷ್ಟರಲ್ಲಿ ಈಗ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಈ ಮೂಲಕ ಬೆಂಗಳೂರು ವಿವಿಯ ಪ್ರತಿಮೆ ವಿವಾದ ಬಗೆಹರಯದೇ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ.

ಸದ್ಯ ಜಾತಿ ರಾಜಕೀಯ ಶುರುವಾಗಿದ್ದು, ಎಲ್ಲಾ ಸಮುದಾಯದ ಪ್ರತಿಮೆಗಳನ್ನ ಇಡುವಂತೆ ಬೆಂಗಳೂರು ವಿವಿ ನೌಕರರಿಂದ ಅಭಿಯಾನ ಶುರುವಾಗಿದೆ. ವಿವಿಯ ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗದ ನೌಕರರ ವೇದಿಕೆಯಿಂದ ಸಹಿ ಅಭಿಯಾನ ಆರಂಭವಾಗಿದೆ. ಸರಸ್ವತಿ, ಬುದ್ಧನ ಪ್ರತಿಮೆ ನಂತರ, ಇದೀಗ ನಾಡಪ್ರಭು ಕೆಂಪೇಗೌಡ, ಬಸವಣ್ಣ, ಕನಕದಾಸರು, ಶಿಶುನಾಳ ಶರೀಫರು, ಮಹಾತ್ಮಾ ಗಾಂಧೀಜಿ ಪ್ರತಿಮೆಗಳನ್ನ ಇಡುವಂತೆ ನೌಕರರಿಂದ ಸಹಿ ಅಭಿಯಾನ ನಡೆಯುತ್ತಿದೆ.
ಈಗಾಗಲೇ ಸರಸ್ವತಿ ವಿಗ್ರಹ ಪಕ್ಕದಲ್ಲಿ ಬುದ್ಧನ ವಿಗ್ರಹ ಇಡಲು ವಿವಿ ಉಪ ಸಮಿತಿ ಅನುಮತಿ ನೀಡಿದೆ. ವಿವಿಯ ನಿರ್ಧಾರಕ್ಕೆ ಬೇಸತ್ತ ನೌಕರರು ಎಲ್ಲಾ ವರ್ಗದ ಸಮುದಾಯಕ್ಕೂ ಅವಕಾಶ ಕೊಡಿ. ಹೀಗಾಗಿ ಈ 5 ವಿಗ್ರಹಗಳನ್ನು ಸರಸ್ವತಿ ವಿಗ್ರಹದ ಪಕ್ಕದಲ್ಲೇ ಇಡಬೇಕು ಎಂದು ಸಹಿ ಅಭಿಯಾನ ಕೈಗೊಂಡಿದ್ದಾರೆ. ಪತ್ರದ ಮೂಲಕ ಸಹಿ ಅಭಿಯಾನಕ್ಕೆ ಮುಂದಾಗಿರುವ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರಿಸಿದ್ದಾರೆ.