ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ರಚಿಸಲಾಗಿದ್ದ ಕಾಂತರಾಜ್ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಸರ್ಕಾರದ ಕೈ ಸೇರುತ್ತಿದ್ದಂತೆ ಪ್ರಕಟಿಸಲಾಗುತ್ತದೆ ಎಂದು ವಿಧಾನ ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ನಂಜುಂಡಿ ಮಾತನಾಡಿ, ಆರನೇ ಅಧಿವೇಶನದಿಂದ ಒಂದೇ ಪ್ರಶ್ನೆ ಕೇಳುತ್ತಿದ್ದೇನೆ. ವಿಶ್ವಕರ್ಮ ಜನಾಂಗದ ಜನಸಂಖ್ಯೆ ಎಷ್ಟು, ಅದರಲ್ಲಿ ಪುರುಷರು ಎಷ್ಟು, ಮಹಿಳೆಯರು ಎಷ್ಟು, ಉದ್ಯೋಗಿ ಎಷ್ಟು, ಶಕ್ತಿ ಇರುವ ಸಮುದಾಯ ಪಾದಯಾತ್ರೆ ಮಾಡುತ್ತಿವೆ. ಹಿಂದುಳಿದವರು ಏನು ಮಾಡಬೇಕು. ಜಾತಿವಾರು ಜನಸಂಖ್ಯೆ ಯಾವಾಗ ಪ್ರಕಟಿಸುತ್ತೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗದ ಆಯೋಗದಿಂದ ಸಮೀಕ್ಷೆ ನಡೆಸಲಾಗಿತ್ತು. ಆದರೆ ಹಿಂದೆ ನಾನು ಕೂಡ ಇದೇ ಪ್ರಶ್ನೆ ಕೇಳಿದಾಗ ಸರ್ಕಾರಕ್ಕೆ ವರದಿ ಬಂದಿಲ್ಲ ಎಂದಿದ್ದರು. ವರದಿಗಾಗಿ 162 ಕೋಟಿ ವೆಚ್ಚವಾಗಿದೆ. ಈಗಲೂ ವರದಿ ಸರ್ಕಾರಕ್ಕೆ ಬಂದಿಲ್ಲ. ಸದ್ಯದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸದಸ್ಯ ಹೆಚ್.ವಿಶ್ವನಾಥ್, 1383 ಜಾತಿಗಳ ಸಮೀಕ್ಷೆ ನಡೆಸಿದ್ದ ವರದಿ ಸಿದ್ಧ ಇದ್ದರೂ ಯಾಕೆ ಬಿಡುಗಡೆ ಮಾಡಿಲ್ಲ. ವರದಿ ಸಿದ್ಧಪಡಿಸಲು ಸೂಚಿಸಿದ್ದ ಸರ್ಕಾರ ಯಾಕೆ ವರದಿ ಬಹಿರಂಗ ಮಾಡುವ ಧೈರ್ಯ ಮಾಡಲಿಲ್ಲ. ನಂತರ ಬಂದ ಮೈತ್ರಿ ಸರ್ಕಾರ ಯಾಕೆ ವರದಿ ಮಂಡಿಸಲಿಲ್ಲ. ಈಗಿನ ಸರ್ಕಾರ ಕೂಡ ಯಾಕೆ ವಿಳಂಬ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಓದಿ: ಮೂರು ತಿಂಗಳಲ್ಲಿ ಹಾಡಿ, ತಾಂಡಾಗಳಿಗೆ ಕಂದಾಯ ಗ್ರಾಮದ ಮಾನ್ಯತೆ: ಆರ್.ಅಶೋಕ್
ಇದಕ್ಕೆ ಉತ್ತರಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಕಾಂತರಾಜ್ ಆಯೋಗದ ಸಮೀಕ್ಷೆ, ಅಂಕಿ-ಅಂಶ ಗಣಕೀಕೃತಗೊಂಡಿದೆ. ಎಲ್ಲಾ ದಾಖಲೆ ಸಿದ್ಧವಿದೆ. ಆದರೆ ಸರ್ಕಾರಕ್ಕೆ ಹಸ್ತಾಂತರವಾಗುವುದು ಮಾತ್ರ ಬಾಕಿ ಇದೆ. ವರದಿ ಬಿಡುಗಡೆ ವಿಚಾರ ಸಂಬಂಧ ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಸಿಎಂ ಯಡಿಯೂರಪ್ಪ ಮತ್ತು ಆಯೋಗಕ್ಕೆ ಬಂದಿರುವ ನೂತನ ಅಧ್ಯಕ್ಷರನ್ನು ಭೇಟಿ ಮಾಡಿ ಆದಷ್ಟು ಬೇಗ ವರದಿ ಪ್ರಕಟಕ್ಕೆ ಪ್ರಯತ್ನಿಸಲಾಗುತ್ತದೆ ಎಂದರು.