ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ದುರ್ಬಳಕೆ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಯುವ ಜನಾಂಗ ತಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ಆಕೆಯ ಖಾಸಗಿ ಪೋಟೊಗಳನ್ನು ಕಳುಹಿಸುವಂತೆ ದುಂಬಾಲು ಬಿದ್ದಿದ್ದ ಕಾಮುಕನ ವಿರುದ್ಧ ನಗರ ಪಶ್ಚಿಮ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಕಾರ್ತಿಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಖಾತೆ ತೆರೆದಿದ್ದ ಕಾರ್ತಿಕ್ ಬಾಲಕಿಯನ್ನು ಪುಸಲಾಯಿಸಿ ಪರಿಚಯ ಮಾಡಿಕೊಂಡಿದ್ದ. 'ನಾನೊಬ್ಬ ಅಗರ್ಭ ಶ್ರೀಮಂತ. ನನಗೆ ಸ್ನೇಹಿತರು ತುಂಬಾ ಕಡಿಮೆಯಿದ್ದಾರೆ. ನನ್ನನ್ನು ಗೆಳೆಯನಾಗಿ ಸ್ವೀಕರಿಸು' ಎಂದು ಸಂದೇಶ ಕಳುಹಿಸಿದ್ದ.
ಇದನ್ನು ನಂಬಿ ಆತನ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡಿದ್ದಾಳೆ. ಪರಿಚಯವಾದ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಬಳಿಕ ನನ್ನನ್ನು ಮದುವೆಯಾಗುವಂತೆ ಪೀಡಿಸಿದ್ದಾನೆ. ಕೆಲ ದಿನಗಳ ಬಳಿಕ ತನ್ನ ಹಾಗೂ ಇತರರ ಆಶ್ಲೀಲ ಫೋಟೊ ಹಾಗೂ ವಿಡಿಯೋಗಳನ್ನೂ ಕಳುಹಿಸಿದ್ದಾನೆ. ಬಳಿಕ ನಿನ್ನ ಗುಪ್ತಾಂಗದ ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಒಂದು ವೇಳೆ ಫೋಟೊಗಳನ್ನು ಕಳುಹಿಸದಿದ್ದರೆ ತನ್ನ ಕೈ ಕೊಯ್ದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದ ಆತಂಕಗೊಂಡ ಬಾಲಕಿ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ಸದ್ಯ ಪಶ್ಚಿಮ ವಿಭಾಗದ ಸಿಎಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಯುವತಿಯರೇ ಜಾಲತಾಣಗಳಲ್ಲಿ ಫೋಟೊ ಹಾಕುವ ಮುನ್ನ ಎಚ್ಚರ..ಎಚ್ಚರ..!