ಬೆಂಗಳೂರು: ನಗರದ ಕಾಚರಕನಹಳ್ಳಿ ಕೊಳೆಗೇರಿಯಲ್ಲಿದ್ದ (ಸಂಡೇ ಬಜಾರ್) ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತಾಗಿ ಕ್ರಮ ಕೈಗೊಳ್ಳದ ಅಧಿಕಾರಿಗಳ ನಡೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಈ ಘಟನೆ ಕುರಿತು ವಕೀಲೆ ವೈಶೈಲಿ ಹೆಗ್ಡೆ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರ ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಘಟನೆಗೆ ಬೇಸರ ವ್ಯಕ್ತಪಡಿಸಿದ ಪೀಠ, ಕ್ರಮ ಜರುಗಿಸುವಲ್ಲಿ ವಿಳಂಬವಾಗಿದ್ದೇಕೆ ಎಂಬುದಕ್ಕೆ ಜೂನ್ 24ರೊಳಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿಕ್ರಮ್ ಹುಯಿಲ್ಗೋಳ್ ಮಾಹಿತಿ ನೀಡಿ, ಬೆಂಕಿಗಾಹುತಿಯಾದ ಪ್ರದೇಶದಲ್ಲಿ ಸುಮಾರು 250 ಗುಡಿಸಲುಗಳು ಇದ್ದವು. ಇವುಗಳಲ್ಲಿ ಮಾರ್ಚ್ 28ರಂದು 30 ಗುಡಿಸಲುಗಳು ಮತ್ತು ಮಾರ್ಚ್ 30ರಂದು 60 ಗುಡಿಸಲುಗಳು ಸುಟ್ಟು ಹೋಗಿವೆ. ಈ ಗುಡಿಸಲುಗಳಲ್ಲಿ ಲಾಕ್ಡೌನ್ಗೆ ಮೊದಲೇ ಖಾಲಿ ಮಾಡಿ ಹೋದ ಕಲಬುರಗಿ ಮೂಲದ ಕಾರ್ಮಿಕರಿದ್ದರು ಎನ್ನಲಾಗ್ತಿದೆ. ಘಟನೆ ಸಂಬಂಧ ಪೊಲೀಸರು ಮೇ 1ರಂದು ಎಫ್ಐಆರ್ ದಾಖಲಿಸಿಕೊಂಡು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಲಾಕ್ಡೌನ್ ಅವಧಿಯನ್ನೇ ಅವಕಾಶ ಮಾಡಿಕೊಂಡಿರುವ ದುಷ್ಕರ್ಮಿಗಳು ಬಡವರ ಗುಡಿಸಲುಗಳಿಗೆ ಬೆಂಕಿ ಹಚ್ಚಿರುವುದು ನಿಜಕ್ಕೂ ದುರದೃಷ್ಟಕರ. ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಕೃತ್ಯಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ವಿಳಂಬವಾಗಿದ್ದೇಕೆ ಎಂಬುದಕ್ಕೆ ವಿವರಣೆ ನೀಡಬೇಕು. ಹಾಗೆಯೇ ಅಗ್ನಿಶಾಮಕ ಇಲಾಖೆ ದಾಖಲಿಸಿಕೊಂಡಿರುವ ವರದಿಯನ್ನು ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.