ಬೆಂಗಳೂರು : ಮದನಪಲ್ಲಿಯ ರೌಡಿಶೀಟರ್ ಮೇಲೆ ಗುಂಡಿನ ದಾಳಿಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನ ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಲೂರಿ ಶಂಕರ್, ಭವಾನಿ ಶಂಕರ್ ಬಂಧಿತರು.
ಹತ್ಯೆಗೆ ಸೂಚನೆ ನೀಡಿದ್ದ ಪ್ರಮುಖ ಆರೋಪಿ ಪಲೂರಿ ಶಂಕರ್ ನ್ಯಾಯಾಲಯದ ಎದುರು ಶರಣಾಗತನಾಗಿದ್ದ ವೇಳೆ ಕೆಆರ್ ಪುರಂ ಪೊಲೀಸರು ವಶಕ್ಕೆ ಪಡೆದರು, ಇನ್ನೊಬ್ಬ ಆರೋಪಿ ಭವಾನಿ ಶಂಕರ್ನನ್ನು ಸಹ ಬಂಧಿಸಲಾಗಿದೆ.
ಬೆಂಗಳೂರ ಕುರುಡುಸೊಣ್ಣೇನಹಳ್ಳಿಯಲ್ಲಿ ಮನೆ ಕಟ್ಟಿಸುತ್ತಿದ್ದ ಮದನಪಲ್ಲಿಯ ರೌಡಿಶೀಟರ್ ಶಿವಶಂಕರ್ ರೆಡ್ಡಿಯ ಮೇಲೆ ಏಕಾಎಕಿ ಡಿಸೆಂಬರ್ 8ರಂದು ಆರೋಪಿಗಳು ಹಾಡಹಗಲೇ ಗುಂಡಿನ ದಾಳಿ ನಡೆಸಿದ್ದರು. ಎರಡು ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಶಿವಶಂಕರ್ ರೆಡ್ಡಿ ಹಾಗೂ ಚಾಲಕ ಅಶೋಕ್ ರೆಡ್ಡಿಯ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಅಶೋಕ್ ರೆಡ್ಡಿ ಕಾಲಿಗೆ ಗಾಯಗೊಳಿಸಿದ್ದರು.
ಕೆಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಳಿಕ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನ ರಚಿಸಲಾಗಿತ್ತು. ನಾಲ್ವರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಇದನ್ನೂಓದಿ:ವಿದೇಶದಲ್ಲಿ ವ್ಯಾಸಂಗ ಮಾಡಬೇಕೆಂಬ ಕನಸು ಈಡೇರದ್ದಕ್ಕೆ ಬೆಂಗಳೂರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ