ಬೆಂಗಳೂರು: ರಾಜ್ಯದ ಏಳು ಮಂದಿ ಸಾಹಿತಿ ಹಾಗೂ ಲೇಖಕರಿಗೆ ಅನಾಮಧೇಯ ವ್ಯಕ್ತಿಗಳಿಂದ ಪತ್ರ ಬರೆದು ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಒಬ್ಬನೇ ವ್ಯಕ್ತಿ ಎಲ್ಲರಿಗೂ ಪತ್ರ ಬರೆದು ಬೆದರಿಕೆ ಹಾಕಿರುವುದಾಗಿ ಮೆಲ್ನೋಟಕ್ಕೆ ಕಂಡುಕೊಂಡಿದ್ದಾರೆ. ಮರುಳಸಿದ್ದಪ್ಪ ನೇತೃತ್ವ ಸಾಹಿತಿಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೆದರಿಕೆ ಪತ್ರ ಬರೆದಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಬೆಂಗಳೂರು ನಗರ ಸಿಸಿಬಿಗೆ ಹಸ್ತಾಂತರಿಸಿ ಎಸಿಪಿ ಮಟ್ಟದ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿತ್ತು. ಇದರಂತೆ ತನಿಖೆ ಆರಂಭಿಸಿದ ಪೊಲೀಸರು ಎಲ್ಲಾ ಪ್ರಕರಣಗಳ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿದ್ದರು. ಬೆದರಿಕೆ ಪತ್ರಗಳು ಕೈಬರಹದಲ್ಲಿ ಬರೆದು ಒಬ್ಬನೇ 7 ಮಂದಿ ಸಾಹಿತಿಗಳಿಗೆ ಜೀವ ಬೆದರಿಕೆ ಹಾಕಿರುವುದು ತಿಳಿದುಬಂದಿದೆ. ದಾವಣಗೆರೆ ಮೂಲದ ವ್ಯಕ್ತಿಯೋರ್ವ ಪತ್ರ ಬರೆದು ವಿವಿಧ ತಾಲೂಕು ಅಂಚೆ ಕಚೇರಿಗಳ ಮೂಲಕ ಪೋಸ್ಟ್ ಮಾಡಿರುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಸಾಹಿತಿ ಡಾ. ಕೆ ಮರುಳಸಿದ್ದಪ್ಪ ಅವರು, ಹಲವಾರು ಸಾಹಿತಿಗಳಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಿರಂತರವಾಗಿ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಸಾಹಿತಿಗಳು ಆತಂಕ, ಮುಜುಗರದಿಂದ ಜೀವನ ಸಾಗಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಕುಂ.ವೀರಭದ್ರಪ್ಪ, ಡಾ. ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್ ಅವರುಗಳಿಗೆ ಅತಿ ಹೆಚ್ಚು ಬೆದರಿಕೆಗಳು ಬಂದಿವೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ, ವಾತಾವರಣ ಸೃಷ್ಟಿಯಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರಿಗೆ ಬಂದ ಗತಿ ಒದಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಬೆದರಿಕೆ ಪತ್ರಗಳ ಬಗ್ಗೆ ಒಂದು ತಂಡ ರಚಿಸಿದ್ದು, ಇನ್ನಷ್ಟು ಪರಿಣಾಮಕಾರಿ ಆಗಿರುವ ವೃತ್ತಿಪರವಾಗಿರುವ ಖಡಕ್ ಅಧಿಕಾರಿಗಳ ಪೊಲೀಸ್ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದ್ದರು.
ಲೇಖಕರು, ಸಾಹಿತಿಗಳು ಹಾಗೂ ಹೋರಾಟಗಾರರಿಗೆ ಬೆದರಿಕೆ ಪತ್ರಗಳನ್ನು ಕಳಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಗೃಹ ಸಚಿವ ಡಾ. ಜಿ.ಪರಮೇಶ್ವರ್ ಕೂಡ ಸಾಹಿತಿಗಳಿಗೆ ಎಲ್ಲ ರೀತಿಯ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದರು
ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಹಿನ್ನೆಲೆ: ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ