ಬೆಂಗಳೂರು : ಖಾಸಗಿ ಹೋಟೆಲ್‌ನಲ್ಲಿ ಪುಂಡಾಟ ನಡೆಸಿದ್ದ ಪ್ರತಿಷ್ಠಿತ ಕಂಪನಿಯ ಮಾಲೀಕನ ಪುತ್ರನ ಗಲಾಟೆ ಕೇಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಹಲ್ಲೆಯಿಂದ ಶುರುವಾದ ಕೇಸ್ ಬಳಿಕ ಡ್ರಗ್ಸ್ ವಿಚಾರ ಬಯಲು ಮಾಡಿತ್ತು. ಆದ್ರೀಗ ಮತ್ತೊಬ್ಬ ಆರೋಪಿ ಶ್ರೀಕಿ ಬಳಿ ಇದ್ದ ಲ್ಯಾಪ್‌ಟಾಪ್ ಸಿಐಡಿಗೆ ರವಾನೆಯಾಗಿದೆ. ಕೇಸ್‌ಗೆ ಮತ್ತೊಂದು ತಿರುವು ಸಿಗುವ ಸಾಧ್ಯತೆಯಿದೆ.
ನವೆಂಬರ್ 6ರಂದು ಪ್ರತಿಷ್ಠಿತ ಹೋಟೆಲ್‌ನಲ್ಲಿ ಪುಂಡಾಟ ಮೆರೆದಿದ್ದ ಉದ್ಯಮಿ ಪುತ್ರ ವಿಷ್ಣು ಭಟ್ ಹಾಗೂ ಹ್ಯಾಕರ್ ಶ್ರೀಕಿ ಬಂಧಿಸಿದ್ದ ಪೊಲೀಸರು ರೂಂನಲ್ಲಿದ್ದ ನಾಲ್ಕು ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಅದರಿಂದ ಕೆಲ ಮಹತ್ವದ ಮಾಹಿತಿ ಕಲೆ ಹಾಕಲು ಮುಂದಾದ ಪೊಲೀಸರು ಸದ್ಯ ನಾಲ್ಕು ಲ್ಯಾಪ್‌ಟಾಪ್‌ಗಳನ್ನು ಸಿಐಡಿಗೆ ನೀಡಿದ್ದಾರೆ.
ಹ್ಯಾಕರ್ ಶ್ರೀಕಿಯಿಂದ ವಶಕ್ಕೆ ಪಡೆಯಲಾದ ಮೂರು ಲ್ಯಾಪ್ಟಾಪ್ಗಳ ರಿಟ್ರೀವ್ಗೆ ಕೋರ್ಟ್ ಮೊರೆ ಹೊಗಿದ್ದ ಪೊಲೀಸರು ಬಳಿಕ ನ್ಯಾಯಾಧೀಶರ ಸೂಚನೆಯಿಂದ ಸಿಐಡಿಗೆ ರವಾನೆ ಮಾಡಿದ್ದಾರೆ. ಈ ಮೂಲಕ ಬಿಟ್ ಕಾಯಿನ್ ಸಂಬಂಧಿತ ಹಾಗೂ ಮತ್ತಷ್ಟು ಹ್ಯಾಕಿಂಗ್ ರಹಸ್ಯದ ಅಸಲಿ ಸತ್ಯ ಬಯಲಾಗುವ ಸಾಧ್ಯತೆ ಇದೆ.
ಲ್ಯಾಪ್ಟಾಪ್ನ ಮಿರರ್ ಇಮೇಜ್ ಮುಖಾಂತರ ತನಿಖೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಂತೆ, ಸಿಐಡಿ ಸೈಬರ್ ತಜ್ಞರು ಪ್ರತಿ ಪೇಜ್ ಇಮೇಜ್ ಮಾಡಲಿದ್ದು, ಶ್ರೀಕಿ ಲ್ಯಾಪ್ಟಾಪ್ಗಳ ಹಿಸ್ಟರಿ ಜಾಲಾಡಲಿದ್ದಾರೆ.
ವಿಷ್ಣು ಡ್ರಗ್ ಮೂಲಕ್ಕೆ ಕೈ ಹಾಕಿದ ಪೊಲೀಸರಿಗೆ ನೋ ಕ್ಲ್ಯೂ: ಅಸಲಿಗೆ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಸಂಬಂಧ ವಿಷ್ಣು ಭಟ್ ಬಂಧಿಸಿದ್ದ ಪೊಲೀಸರು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಡ್ರಗ್ ಸೇವನೆ ಮಾಡಿರುವುದು ಪತ್ತೆ ಬಳಿಕ ಆತನ ಮನೆ ಮೇಲೆ ದಾಳಿ ಮಾಡಿ ಸಹ ಡ್ರಗ್ಸ್ ವಶಕ್ಕೆ ಪಡೆದಿದ್ದರು.
ಇದಾದ ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಡೇವಿಡ್ ಎಂಬಾತನಿಗೆ ಬಲೆ ಬೀಸಿದ್ದ ಖಾಕಿ ಪಡೆ, ಅಸಲಿಗೆ ಡೇವಿಡ್ ಎಂಬ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಇಲ್ಲದೇ ಅನುಮಾನಗೊಂಡಿದ್ದಾರೆ. ಅಲ್ಲದೇ, ಗಲಾಟೆಯಾಗುವ ಹಿಂದಿನ ದಿನಗಳಲ್ಲೇ ತನ್ನ ಮೊಬೈಲ್ ಕಳ್ಳತನವಾಗಿತ್ತು ಎಂದು ವಿಷ್ಣು ಭಟ್ ಹೇಳಿಕೆ ನೀಡಿದ್ದಾರೆ.
ಈ ವಿಚಾರ ಸಂಬಂಧಿತ ಪೊಲೀಸರು ಆತನ ಎರಡು ನಂಬರ್ಗಳ ಮೂಲಕ ಸಿಡಿಆರ್ ಕಲೆ ಹಾಕಿದ್ದಾರೆ. ಆದರೆ, ಈ ವೇಳೆ ಸಹ ಮಾಹಿತಿ ಇಲ್ಲದೇ, ವಾಟ್ಸ್‌ಆ್ಯಪ್ ರಹಸ್ಯ ಇರಬಹುದಾದ ಶಂಕೆ ಸಹ ವ್ಯಕ್ತಪಡಿಸಿದ್ದಾರೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ವಿಷ್ಣು ಭಟ್ ಡ್ರಗ್ ಮೂಲ ಇನ್ನು ಗೊಂದಲವಾಗಿದೆ. ಹೀಗಾಗಿ, ಆತನನ್ನು ಮತ್ತೆ ಕಸ್ಟಡಿಗೆ ಪಡೆಯಲು ನಿರ್ಧರಿಸಿರುವ ಜೆಬಿ ನಗರ ಪೊಲೀಸರು, ವಶಕ್ಕೆ ಪಡೆದು ಡ್ರಿಲ್ ನಡೆಸಲು ಸಿದ್ಧತೆ ಮಾಡಿಕೊಳ್ಳುತಿದ್ದಾರೆ.
ಇನ್ನು ಇದರ ಜೊತೆ ಜೊತೆಗೆ ಸಿಐಡಿಯಿಂದ ರಿಟ್ರೀವ್ ಪ್ರಕ್ರಿಯೆ ಸಹ ಆರಂಭವಾಗಿದ್ದು, ಹಲ್ಲೆ ಪ್ರಕರಣದ ಮುಂದಿನ ಬೆಳವಣಿಗೆ ಯಾವ ತಿರುವು ಪಡೆದುಕೊಳ್ಳುವುದರ ಬಗ್ಗೆ ಕಾದು ನೋಡಬೇಕಿದೆ.